Wednesday, September 20, 2017

ಬನ್ನಿ ಅರಿಯೋಣ ಶ್ರೀರಂಗಪಟ್ಟಣದ ಮಹಾನವಮಿ/ ದಸರಾ / ನವರಾತ್ರಿ ಸಂಭ್ರಮದ ಇತಿಹಾಸವ ..... !ಶ್ರೀ ರಂಗಪಟ್ಟಣದಲ್ಲಿ   ಮೈಸೂರು ಯದು ಕುಲದ   ಅರಸರ  ಅರಮನೆ ಇದ್ದ ಪ್ರದೇಶ 

ಕಳೆದ ಒಂದು ತಿಂಗಳ ಹಿಂದೆ   ಒಂದು ರಾತ್ರಿ. "ಮೈಸೂರು  ದಸರಾ  ಎಷ್ಟೊಂದು ಸುಂದರ  ಚೆಲ್ಲಿದೆ ನಗೆಯ ಪನ್ನೀರ ..... ಎಲ್ಲೆಲ್ಲು ನಗೆಯ ಪನ್ನೀರಾ ........"  ಅಂತಾ   ಹಾಡು ಬರ್ತಾ ಇತ್ತು,  ಅದೇ ಗುಂಗಿನಲ್ಲಿ  ನಿದ್ದೆಗೆ ಜಾರಿದ್ದೆ .  ಕನಸಿನಲ್ಲಿ   ರಾಜರುಗಳ ಒಡ್ಡೋಲಗ  ದರ್ಶನ ಆಗುತ್ತಿತ್ತು, ಯಾರೋ ಅಳುತ್ತಿರುವ  ದ್ವನಿ ಕೇಳಿ ಅತ್ತ ನಡೆದೇ .....! ಶ್ರೀ ರಂಗಪಟ್ಟಣದ  ಕಾವೇರಿ ತೀರದಲ್ಲಿ  ಒಬ್ಬ ವ್ಯಕ್ತಿ ಕುಳಿತು  ಅಳುತ್ತಿರುವುದ ಕಂಡೆ  ಹತ್ತಿರ ಹೋಗಲಾಗಿ  ,  ಅದು  ಮತ್ತೆ ಮತ್ತೆ  ಬಿಕ್ಕಿಸಿ  ನನ್ನತ್ತ ನೋಟ ಬೀರಿತು.  ಯಾರಮ್ಮ ನೀನು ...?  ಅನ್ನುತ್ತಾ   ಹತ್ತಿರ   ತೆರಳಲು  ಕೈ ಅಡ್ಡ ಪಡಿಸಿ  ನಾನು ಈ ಊರಿನ "ದಸರಾ ವೈಭವ "  ಕಂಡ  ಕಾವೇರಿ  .... ! ಅನ್ನುತ್ತಾ  ಮಾಯವಾದಳು   ಆ  ನಾರಿ.  ತಕ್ಷಣ ಎಚ್ಚರ ಆಯ್ತು , ಅರೆ ಶ್ರೀ ರಂಗ ಪಟ್ಟಣದ  ದಸರಾ ವೈಭವ   ಹೇಗಿತ್ತು ಅನ್ನುತ್ತಾ   ಮಾಹಿತಿ   ಅರಸಿ ಹೊರಟೆ , ಆಗ ದೊರೆತ ಮಾಹಿತಿ   ಶ್ರೀ ರಂಗ ಪಟ್ಟಣದ  ವೈಭವದ   ದಸರಾ  ಅಥವಾ ಮಹಾನವಮಿ, ಆಚರಣೆಯ   ಸಂಭ್ರಮದ  ಆಚರಣೆ ವಿಧಾನಗಳು, ಬನ್ನಿ ಶ್ರೀ ರಂಗ ಪಟ್ಟಣದ   ದಸರಾ ಸಂಭ್ರಮ ಹೇಗಿತ್ತು ನೋಡೋಣ. 


ಶ್ರೀ ರಂಗ ಪಟ್ಟಣದಲ್ಲಿ  ಆಳ್ವಿಕೆ ನಡೆಸಿದ  ಯದುಕುಲದ  ಮಹಾರಾಜರುಗಳು 
ಎಲ್ಲರಿಗೂ ತಿಳಿದಂತೆ  ವಿಜಯ ನಗರ ಸಾಮ್ರಾಜ್ಯ ಅವಸಾನದ ಅಂಚಿಗೆ  ತೆರಳುತ್ತಿದ್ದ  ಕಾಲದಲ್ಲಿ  ಮೈಸೂರು ಅರಸರು   ನಂತರ  ಚಾಮರಾಜ ಒಡೆಯರ್   v [೧೬೧೭-೧೬೩೭,], ಇಮ್ಮಡಿ ರಾಜ ಒಡೆಯರ್ [೧೬೩೭-೧೬೩೮],  ಕಂಠೀರವ ನರಸರಾಜ ಒಡೆಯರ್  1 ,[೧೬೩೮-೧೬೫೯],ದೇವರಾಜ ಒಡೆಯರ್ [ ೧೬೫೯-೧೬೭೩] , ಚಿಕ್ಕ ದೇವರಾಜ ಒಡೆಯರ್[೧೬೭೩-೧೭೦೪],  ನರಸರಾಜ ಒಡೆಯರ್ [ ೧೭೦೪ -೧೭೧೪],  ಒಂದನೇ ಕೃಷ್ಣರಾಜ ಒಡೆಯರ್  [ ೧೭೧೪-೧೭೩೨], ಏಳನೇ ಚಾಮರಾಜ ಒಡೆಯರ್ [ ೧೭೩೨-  ೧೭೩೪ ] , ಎರಡನೇ ಕೃಷ್ಣರಾಜ ಒಡೆಯರ್  [ ೧೭೩೪- ೧೭೬೧ ]      ಆ ನಂತರ  ಹೆಸರಿಗೆ ಮೈಸೂರ ಅರಸರೂ ಇದ್ದೂ    ಹೈದರ್ ಅಲಿಯ   ಪ್ರತಿನಿಧಿಸಿದ್ದ ಆಡಳಿತದಲ್ಲಿ   ಎರಡನೇ  ಕೃಷ್ಣ ರಾಜ ಒಡೆಯರ್ [ ೧೭೬೧- ೧೭೬೬] ನಂಜರಾಜ ಒಡೆಯರ್ [೧೭೬೬-೧೭೭೦ ],ಬೆಟ್ಟದ ಚಾಮರಾಜ ಒಡೆಯರ್ v11     {೧೭೭೦-೧೭೭೬] ನಂತರ ಖಾಸಾ ಚಾಮರಾಜ ಒಡೆಯರ್ V111  ರ  ಪ್ರತಿನಿದಿಯಾಗಿ ಹೈದರ್ ಅಲಿ ,ಆನಂತರ ಟಿಪ್ಪೂ ಸುಲ್ತಾನ್         ಆಳ್ವಿಕೆ ನಡೆಸಿ ಕ್ರಿ .ಶ.1799  ರ ಮೈಸೂರಿನ ಅಂತಿಮ ಯುದ್ದದ ಸೋಲಿನ ನಂತರ  ಶ್ರೀ ರಂಗ ಪಟ್ಟಣ ದ ಒಂದು  ಸುವರ್ಣ ಅಧ್ಯಾಯ ಮುಗಿದಿತ್ತು

                                

 ಶ್ರೀ ರಂಗಪಟ್ಟಣದ   ಹಳೆಯ ಅರಮನೆಯ  ಒಂದು ಭಾಗ 

ವಿಜಯನಗರದ ನಂತರ ಮೈಸೂರು ಅರಸರ ಆಳ್ವಿಕೆಗೆ ಹಲವಾರು  ಪ್ರದೇಶಗಳು ಬಂದರೂ ಸಹ, ವಿಜಯನಗರ  ಸಾಮ್ರಾಜ್ಯದ  ಹಲವಾರು ಸಾಂಸ್ಕೃತಿಕ  ಆಚರಣೆಗಳು, ಆಡಳಿತ ವಿಧಿ ವಿಧಾನಗಳು  ಮೈಸೂರು  ಅರಸರ ಕಾಲದಲ್ಲಿಯೂ  ಮುಂದುವರೆದವು, ಅದರಲ್ಲಿ ವಿಶೇಷವಾಗಿ  ಆಶ್ವೀಜ  ಮಾಸದ  ಶುಕ್ಲ ಪಕ್ಷದಲ್ಲಿ ಪ್ರಥಮಾ ತಿಥಿಯಿಂದ ದಶಮಿಯವರೆವಿಗೆ . ಮಹಾನವಮಿ  ಹಬ್ಬದ  ಆಚರಣೆ  ಮುಂದುವರೆಯಿತು.  


ಬನ್ನಿ  ಮೊದಲು ಮಹಾನವಮಿ   ಹಬ್ಬ ಆಚರಣೆಯ ಬಗ್ಗೆ ತಿಳಿಯೋಣ   ಮಹಾನವಮಿ / ವಿಜಯ ದಶಮಿ /  ಹಬ್ಬದ ಆಚರಣೆ ಪ್ರತೀ ಸಂವತ್ಸರದ ಆಶ್ವಯುಜ ಮಾಸದ ಶುಕ್ಲ ಪಕ್ಷದಲ್ಲಿ ಪ್ರಥಮ ಪಾಡ್ಯ  ತಿಥಿಯಿಂದ ದಶಮಿಯವರೆವಿಗೆ ದಿನ ನಿತ್ಯ ಪೂಜೆ ಪುನಸ್ಕಾರ, ಸಂತರ್ಪಣೆ, ಹಾಗೂ  ಹಬ್ಬದ ವಾತಾವರಣವನ್ನು ಕಾಣಬಹುದು. ಈ ಕಾಲವು ಎಲ್ಲ ದೇವತೆಗಳ ಉಪಾಸನೆಗಳಿಗೆ ಶ್ರೇಷ್ಠವಾಗಿದ್ದರೂ ಶಕ್ತಿದೇವತೆಯನ್ನು ಪ್ರಸನ್ನಗೊಳಿಸುವ ಕಾಲವಾಗಿದೆ .  ಮಹಾನವಮಿ ಬಗ್ಗೆ  ಹಿನ್ನೆಲೆ ಹುಡುಕುತ್ತಾ ಹೊರಟಾಗ  ಕೆಲಅಂಶಗಳು ಪೌರಾಣಿಕ ಹಿನ್ನೆಲೆಯಲ್ಲಿ  ಉಲ್ಲೇಖಗೊಂಡಿವೆ . 

 ೧]  ಪೌರಾಣಿಕ  ಹಿನ್ನೆಲೆಯ ಪ್ರಕಾರ-ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷ ನನ್ನು ಶಕ್ತಿ ಮತ್ತು ಯುಕ್ತಿಯಿಂದ  ಆದಿಶಕ್ತಿ  ಚಾಮುಂಡಿ ಕೊಲ್ಲುತ್ತಾಳೆ. ಆದುದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ.  ಎಂಬ ಮಾಹಿತಿ ತಿಳಿಯುತ್ತದೆ.

೨] ಪೌರಾಣಿಕ ಹಿನ್ನೆಲೆ ರಾಮಾಯಣ ದಲ್ಲಿ ಶ್ರೀ ರಾಮನು ರಾವಣನನ್ನು  ಸಂಹಾರ ಮಾಡಿ  ವಿಜಯ ಸಾಧಿಸಿದ ದಿನ ವೆಂದೂ  ಯುದ್ದಕ್ಕೆ ಮೊದಲು  ಶ್ರೀ ರಾಮನು  ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟ ಶಕ್ತಿ ರಾವಣನ ಮೇಲೆ ಶ್ರೀ ರಾಮನ ವಿಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸುವರು. 

೩] ಮಹಾಭಾರತದಲ್ಲಿ  ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನವೂ ಇದೆಂದು ಹೇಳಲಾಗುತ್ತದೆ.ಮಹಾ ಭಾರತದ ಯುದ್ದದ ಮೊದಲು  ಪಾರ್ಥನು  ಶಮಿ ವೃಕ್ಷವನ್ನು ಪೂಜಿಸಿ  ಅದರಲ್ಲಿದ್ದ   ಆಯುಧಗಳನ್ನು  ಮತ್ತೆ ಧರಿಸುವ ಬಗ್ಗೆ  ಪ್ರಸ್ತಾಪವಿದೆ. 


 ಐತಿಹಾಸಿಕ   ಹಿನ್ನೆಲೆ   ಗಮನಿಸಿದಾಗ  ಉತ್ತರ ಭಾರತದಲ್ಲಿ   ರಾಮ ಲೀಲಾ   ಆಚರಣೆ ಮಾಡಿದರೂ ಸಹ    ಆಚರಣೆ ಇದ್ದರೂ ಸಹ  ಇದು  ವಿಷ್ಣು ಲೀಲೆಯ  ನಾಟಕದ  ಅವತಾರದಂತೆ  ಜಾನಪದ ಆಚರಣೆ ಆಗಿದೆ ಅಷ್ಟೇ.   ಆದರೆ  ಇದನ್ನು ಒಂದು   ಐತಿಹಾಸಿಕ  ಹಬ್ಬವಾಗಿ  ಆಚರಿಸಿದ ಬಗ್ಗೆ  ಮೊದಲು  ಮಹಾನವಮಿ  ಉಲ್ಲೇಖ  ವಿಜಯನಗರ   ಸಾಮ್ರಾಜ್ಯದ  ಇತಿಹಾಸದಲ್ಲಿ ಕಾಣಸಿಗುತ್ತದೆ.    ಅದಕ್ಕಿಂತ ಮೊದಲು  ಯಾವ ಯಾವ  ಅರಸರ ಸಾಮ್ರಾಜ್ಯಗಳು  ಮಹಾನವಮಿ  ಆಚರಣೆ ಮಾಡಿದರು ಎಂಬ ಬಗ್ಗೆ  ಎಲ್ಲಿಯೂ ಮಾಹಿತಿ ಲಭ್ಯವಿಲ್ಲ. ಹಾಗಾಗಿ  ಮೊದಲ ಆಚರಣೆ ವಿಜಯನಗರ   ಸಾಮ್ರಾಜ್ಯದಲ್ಲಿ   ಆಯಿತೆಂದು  ಅಂದುಕೊಳ್ಳಬೇಕಾಗಿದೆ.    ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ ಮನೆಗಳಲ್ಲೂ ಪ್ರಚಲಿತವಾಯಿತು.

ಶ್ರೀ ರಂಗನ  ಮಡಿಲಲ್ಲಿ  ದಸರಾ  ವೈಭವ ವಿತ್ತು ಅಧಿಕೃತ ದಾಖಲೆಗಳ ಆಧಾರದಲ್ಲಿ ಮೈಸೂರು ಸಾಮ್ರಾಜ್ಯದ  ರಾಜ ಒಡೆಯರ್ {1578–1617}  ಅವರ ಕಾಲದಲ್ಲಿ   1610 ರ ಸೆಪ್ಟೆಂಬರ್ 8   ರಿಂದ 17  ರ ವರೆಗೆ    ಮೊದಲ ಮಹಾನವಮಿ ಆಚರಣೆ ಆಯಿತೆಂದು  ತಿಳಿದು ಬರುತ್ತದೆ. ಅಚ್ಚರಿಯ ವಿಚಾರವೆಂದರೆ  1610  ರ ಸೆಪ್ಟೆಂಬರ್  6  ರಂದು  ರಾಜ ವೊಡೆಯರ್ ಅವರ ಹಿರಿಯ  ಮಗ  ನರಸರಾಜ  ಒಡೆಯರ್   ದೈವಾಧೀನವಾಗಿರುತ್ತಾರೆ , ಆದರೂ ಸಹ   ರಾಜ ಒಡೆಯರ್ ಅವರು   ಶಾಸ್ತ್ರ  ಸಂಪನ್ನರನ್ನು  ಸಂಪರ್ಕಿಸಿ,  ಮಹಾನವಮಿ ಹಬ್ಬದ ಆಚರಣೆ ಮಾಡಿಯೇ ಬಿಡುತ್ತಾರೆ, ತದನಂತರ  ಒಂದು ಶಾಸನ ರಚಿಸಿ  ಒಂದು ವೇಳೆ  ರಾಜ ಮನೆತನದಲ್ಲಿ  ಇಂತಹ ಘಟನೆ ಸಂಭವಿಸಿದರೂ ಸಹ  ಮುಂದೆ ನಡೆಯುವ  ಮಹಾನವಮಿ ಹಬ್ಬದ ಆಚರಣೆಗೆ  ಅಡಚಣೆ ಆಗಬಾರದೆಂದು  ನಿಯಮ ಮಾಡಲಾಗುತ್ತದೆ.   ಇದೆ ಆಳ್ವಿಕೆ ಕಾಲದಲ್ಲಿ ಶ್ರೀ ರಂಗಪಟ್ಟಣದಲ್ಲಿ   ಆಡಳಿತ ನಿರ್ವಹಣೆಗೆ  "ದಳವಾಯಿ " [ ನಮ್ಮಲ್ಲಿನ   ಸರ್ಕಾರದ   ಮುಖ್ಯ ಕಾರ್ಯದರ್ಶಿಗಳ ತರಹದ ಹುದ್ದೆ]    ನೇಮಕಾತಿಯನ್ನು  ಪುನಃ  ಪ್ರಾರಂಭ ಮಾಡಲಾಗುತ್ತದೆ. ಅದರಂತೆ ಮೊದಲ ದಳವಾಯಿ ಯಾಗಿ     ಕರಿಕಾಳ ಮಲ್ಲರಾಜಯ್ಯ  ಎಂಬುವರ ನೇಮಕವಾಗುತ್ತದೆ. 1610 ರಲ್ಲಿ ಶ್ರೀ ರಂಗಪಟ್ಟಣದಲ್ಲಿ  ಪ್ರಾರಂಭವಾದ  ಮಹಾನವಮಿ ಆಚರಣೆ  ಹೇಗೆ ನಡೆಯುತ್ತಿತ್ತು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ,   ಅಂದರೆ  1610 ರಿಂದ 1647  ರವರೆಗೆ ಅವಲೋಕನ ನಡೆಸಿದರೆ ,  ರಾಜ ಒಡೆಯರ್ ನಂತರ ಬಂದ  ನಾಲ್ವಡಿ ಚಾಮರಾಜ ಒಡೆಯರ್{1617–1637}  ಅವರು  ಮಹಾನವಮಿ ಆಚರಿಸಿದ ಬಗ್ಗೆ   ಮಾಹಿತಿ ಲಭ್ಯವಿಲ್ಲ  , ನಾಲ್ವಡಿ ಚಾಮರಾಜ  ಒಡೆಯರ್  ಅವರು ತಮ್ಮ 35  ವರ್ಷದಲ್ಲಿ   1637 ರ ಮೇ 2  ನೆ ತಾರೀಕು  ನಿಧನರಾಗುತ್ತಾರೆ,  ಅದೇ ವರ್ಷ ಅಂದರೆ  1637 ರ ಮೇ  14  ನೆ ತಾರೀಕಿನಂದು ಇಮ್ಮಡಿ ರಾಜ ಒಡೆಯರ್ ರಾಜ ಸಿಂಹಾಸನ ಅಲಂಕಾರ ಮಾಡುತ್ತಾರೆ   ಆದರೆ 1638 ರ ಅಕ್ಟೋಬರ್ 8  ರಂದು ತಮ್ಮ 27  ನೆ ವರ್ಷದಲ್ಲಿ   ಮರಣ ಹೊಂದುತ್ತಾರೆ, ಇವರ ಅವಧಿಯಲ್ಲಿ ಮಹಾನವಮಿ ಆಚರಣೆಯಾದ ಬಗ್ಗೆ ಮಾಹಿತಿ ಇಲ್ಲಾ,  


 ಕಂಠೀರವ ನರಸರಾಜ ಒಡೆಯರ್  {ಚಿತ್ರ ಕೃಪೆ  ಗೂಗಲ್  ಅಂತರ್ಜಾಲ } 


ನಂತರ ಮೈಸೂರಿನ  ಅರಸರಾಗಿದ್ದ ಇಮ್ಮಡಿ ರಾಜ ಒಡೆಯರ್   ಅವರಿಗೆ ಸಂತಾನವಿಲ್ಲದ ಕಾರಣ ಕಂಠೀರವ ನರಸರಾಜ ಒಡೆಯರ್  ಅವರು   ಶ್ರೀ ರಂಗಪಟ್ಟಣದಲ್ಲಿ  1638 ರ  ನವೆಂಬರ್ 22  ರಂದು  ಪ್ರಥಮವಾಗಿ  ರಾಜ್ಯಭಾರದ   ಹೊಣೆ ಹೊತ್ತು ಸಿಂಹಾಸನ ಅಲಂಕಾರ ಮಾಡುತ್ತಾರೆ.   ಇವರು ನರಸಿಂಹ ಜಯಂತಿಯಂದು ಜನಿಸಿದ ಕಾರಣ [ 1615 ಮೇ 2]   ನೆನಪಿಗಾಗಿ  ಶ್ರೀ ರಂಗಪಟ್ಟಣದಲ್ಲಿ    ಮೈಸೂರು ಯದು ವಂಶ ಅರಸರ ಅರಮನೆಯ  ಸಮೀಪವೇ .     ನರಸಿಂಹ ದೇವಾಲಯ ನಿರ್ಮಾಣ ಆಗುತ್ತದೆ,   ಅವರು ಉಪಯೋಗಿಸುತ್ತಿದ್ದ ಖಡ್ಗಕ್ಕೆ  "ವಿಜಯನಾರಸಿಂಹ  ಖಡ್ಗ"   ಎಂಬ  ನಾಮಾಂಕಿತ ವಾಗಿರುತ್ತದೆ,    ಅಸಮಾನ್ಯ ಪರಾಕ್ರಮಿ, ಒಳ್ಳೆಯ ಆಡಳಿತಗಾರ  ಎಂಬ ಕೀರ್ತಿ ಎಲ್ಲೆಡೆ ಹಬ್ಬಿರುತ್ತದೆ. ಇವರ   ಆಡಳಿತ  ಕಾಲದಲ್ಲಿ    1647 ರ ಸೆಪ್ಟೆಂಬರ್  19  ರಿಂದ 28  ರ ವರೆಗೆ  ನಡೆದ  ವೈಭವದ ಮಹಾನವಮಿ ಹಬ್ಬದ    ಆಚರಣೆ  ಬಗ್ಗೆ  ಮೊದಲ  ಮಾಹಿತಿ  ಇತಿಹಾಸದ   ಪುಟಗಳಲ್ಲಿ ದಾಖಲಾಗಿದೆ. ಬನ್ನಿ   ಸಂಭ್ರಮದ  ಘಟನೆಗಳನ್ನು  ತಿಳಿಯೋಣ. 

 ಮಹಾನವಮಿ ಆಚರಣೆಗೆ   ಇನ್ನೂ ಹಲವಾರು ತಿಂಗಳುಗಳು ಇರುವಂತೆಯೇ  ಹೊಸ  ಹೊಸ ಪಂಚಾಂಗ  ಬಂದ ತಕ್ಷಣ    ಕಂಠೀರವ ನರಸರಾಜ ಒಡೆಯರ್  ಅವರು  ಆಸ್ಥಾನದ  ಜ್ಯೋತಿಷಿ  ಗಳನ್ನೂ,  ಪಂಡಿತರನ್ನು ಕರೆಸಿ  ಸಮಾಲೋಚನೆ ನಡೆಸಿ ಮಹಾನವಮಿ ಆಚರಣೆಯ  ಕಾರ್ಯಕ್ರಮಗಳ  ರೂಪ ರೇಷೆ  ತಯಾರು ಮಾಡಿಕೊಂಡು , ಕಾರ್ಯಕ್ರಮಕ್ಕೆ  ಪ್ರಾಥಮಿಕ  ಹಂತದ  ಚಾಲನೆ   ನೀಡುತ್ತಿದ್ದರು,  ಇದರ ಜವಾಬ್ಧಾರಿಯನ್ನು  ಹೇಗೆ ನಿಭಾಯಿಸಬೇಕೂ ಎಂಬ ಬಗ್ಗೆ  ದಳವಾಯಿ   ಲಿಂಗರಾಜಯ್ಯ ನ ಜೊತೆ  ಸಮಾಲೋಚನೆ ಮಾಡಿ  ಸಂಪೂರ್ಣ  ಮಹಾನವಮಿ  ಆಚರಣೆಯ   ಕಾರ್ಯಕ್ರಮದ   ಹೊಣೆಯನ್ನು  ದಳವಾಯಿ ಲಿಂಗರಾಜಯ್ಯ ರವರಿಗೆ  ವಹಿಸಿ  ಅಧಿಕಾರ ನೀಡಲಾಗುತ್ತಿತ್ತು,  ನಂತರ  ಇದರ ಅನುಷ್ಠಾನ ವನ್ನು   ದಳವಾಯಿ ಲಿಂಗರಾಜಯ್ಯ ನವರು    ಶ್ರೀ ರಂಗಪಟ್ಟಣ  ರಾಜಧಾನಿಯ   ರಾಜ ಪ್ರಮುಖ  ಅಧಿಕಾರಿ  ಅಥವಾ  ಮೇಯರ್   ಲಿಂಗೇಗೌಡ  ಅವರಿಗೆ  ಸೂಚನೆ ನೀಡಿ   ಮಹಾನವಮಿಗೆ  ಸಿದ್ದತೆ  ಮಾಡಿಕೊಳ್ಳುತ್ತಿದ್ದರು. 

ಮೊದಲು ತಯಾರಾಗುತ್ತಿದ್ದುದೆ   ತಾಳೆಗರಿಯ   ಆಹ್ವಾನ  ಪತ್ರಿಕೆ  ಇದರಲ್ಲಿ ಮಹಾನವಮಿ  ಹಬ್ಬಕ್ಕೆ    ತಮ್ಮ ಪರಿವಾರದೊಂದಿಗೆ  ಆಗಮಿಸುವಂತೆ ಎಲ್ಲಾ ಸಾಮಂತ / ಗೆಳೆಯ ರಾಜರುಗಳಿಗೆ, ಪಾಳೆಯಗಾರರಿಗೆ ,  ಆಹ್ವಾನ  ಪತ್ರಿಕೆಗಳನ್ನು  ರಾಜ ಪ್ರತಿನಿಧಿಗಳ ಮೂಲಕ  ಕಳುಹಿಸಲಾಗುತ್ತಿತ್ತು,   ಹೊಳೆನರಸಿಪುರ,   ಬೇಲೂರು, ಕುಣಿಗಲ್,ಮಾಗಡಿ,  ನಂಜರಾಯಪಟ್ಟಣ , ಇಕ್ಕೇರಿ, ತಂಜಾವೂರು,  ಮಧುರೆ, ಕೊಡಗು, ಮಲೆಯಾಳ,  ಕೊಂಕಣ ,  ರಾಜರುಗಳಿಗೆ  ಆಹ್ವಾನ ಪತ್ರಿಕೆ   ತಲುಪುತ್ತಿತ್ತು. ಇದಷ್ಟೇ  ಅಲ್ಲದೆ,ಬೇಡ  ಜನಾಂಗದ  ನಾಯಕನಿಗೂ  ಆಹ್ವಾನ ಪತ್ರಿಕೆ  ಕಳುಹಿಸಲಾಗುತ್ತಿತ್ತು.   

ಇದರ ಜೊತೆಯಲ್ಲೇ  ರಾಜಧಾನಿ  ಶ್ರೀ ರಂಗ ಪಟ್ಟಣದಲ್ಲಿ ಅರಮನೆಯ ಅಲಂಕಾರ  ಹಾಗು ಪಟ್ಟಣದ ಪ್ರಮುಖ ಬೀದಿಗಳ  ಅಲಂಕಾರ  ಮಾಡಲಾಗುತ್ತಿತ್ತು. ಅರಮನೆಯ ದರ್ಭಾರ್ ಸಭಾಂಗಣ [ ಓಲಗ  ಶಾಲೆ,  ಆಸ್ಥಾನ ಮಂಟಪ]   ಚಂದ್ರ ಶಾಲೆ [ ಆಯುಧ ಶಾಲೆ ]  ಉಗ್ರಾಣ ಶಾಲೆ,  ಉಡುಗೊರೆಗಳ   ಬೊಕ್ಕಸ ಶಾಲೆ,  ತಪಾಸಣೆ   ಆಗುತ್ತಿತ್ತು,  ಆ ಶಾಲೆಗಳಲ್ಲಿ  ಬಣ್ಣ ಬಣ್ಣಗಳ ಚಿತ್ರಾದ  ಅಲಂಕಾರ ಮಾಡಲಾಗುತ್ತಿತ್ತು,    ಉಗ್ರಾಣ ಶಾಲೆಯಲ್ಲಿ   ಆಹಾರ   ಸಾಮಗ್ರಿಗಳ, ತೈಲಗಳ , ದವಸ, ಧಾನ್ಯ,  ಉರುವಲು,  ತುಪ್ಪ, ಬೆಣ್ಣೆ,  ಹಣ್ಣು ಹಂಪಲು,  ತರಕಾರಿ, ಹಾಗು   ಇತರ  ಎಲ್ಲಾ ಬಗೆಯ    ಅಡಿಗೆ ಸಾಮಗ್ರಿಗಳ   ತಪಶೀಲು ನಡೆಸಿ   ಮಹಾನವಮಿಗೆ  ಉಗ್ರಾಣವನ್ನು ಅಣಿಗೊಳಿಸಲಾಗುತ್ತಿತ್ತು.    ಉಡುಗೊರೆಗಳ ಬೊಕ್ಕಸ   ಮಹಾನವಮಿ ಆಚರಣೆಗೆ  ಅಗತ್ಯವಿರುವ  ಸಾಮಗ್ರಿಗಳ  ದಾಸ್ತಾನು  ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಲಾಗುತ್ತಿತ್ತು, ಒಂದು ವೇಳೆ ಅಗತ್ಯ ಬಿದ್ದರೆ ಅವುಗಳ   ಸಂಗ್ರಹಕ್ಕೆ   ತಕ್ಷಣ  ಕ್ರಮವಹಿಸಲಾಗುತ್ತಿತ್ತು.  ಚಂದ್ರ ಶಾಲೆಯಲ್ಲಿ ಆಯುಧಗಳ  ದಾಸ್ತಾನು, ಅವುಗಳ ಸಾಮರ್ಥ್ಯ ಗಳ ತಪಾಸಣೆ ಮಾಡಲಾಗುತ್ತಿತ್ತು,   ಮುಂದುವರೆದು,   ನಂತರ ಕುದುರೆ ಲಾಯ ಹಾಗು ಆನೆಗಳ  ಮನೆ ತಪಾಸಣೆ ಮಾಡಿ  ಅವುಗಳ ಆರೋಗ್ಯ,  ಲಾಯ ಹಾಗು ಮನೆಗಳ ದುರಸ್ಥಿ , ಮಹಾನವಮಿ  ಕಾರ್ಯಕ್ರಮಕ್ಕೆ   ಕುದುರೆ, ಆನೆಗಳ   ತಯಾರಿ    ಮಾಡಲಾಗುತ್ತಿತ್ತು. 


 ನಂತರ  ಶುರುವಾಗುತಿತ್ತು   ಮಹಾನವಮಿಗೆ ಆಗಮಿಸುವ   ಆಹ್ವಾನಿತರಿಗೆ  ಉಳಿಯಲು ಬಿಡದಿ ವ್ಯವಸ್ಥೆ ,   ಮಹಾನವಮಿಗೆ   ಆಗಮಿಸುವ  ವಿವಿಧ ಧಾರ್ಮಿಕ  ಸ್ವಾಮಿಗಳು,  ಸನ್ಯಾಸಿಗಳು, ವಿವಿಧ ರಾಜ್ಯಗಳ   ರಾಜರುಗಳಿಗೆ , ಅವರ ಪರಿವಾರದೊಂದಿಗೆ     ಆಗಮಿಸುತ್ತಿದ್ದ,   ವಿಧ್ವಾಂಸರು,  ಕವಿಗಳು,   ಸಂಗೀತಗಾರರು, ವಿವಿಧ ಬಗೆಯ ಕಲಾವಿದರು,   ಕುಸ್ತಿಪಟುಗಳು, ಮಲ್ಲ ಯುದ್ದದ  ಜಟ್ಟಿಗಳು,  ವ್ಯಾಪಾರಿಗಳು,   ನರ್ತಕಿಯರು, ವಿವಿಧ ಬಗೆಯ ವೃತ್ತಿಯ  ಹೆಂಗಸರುಗಳಿಗೆ   ಅವರುಗಳ  ಸ್ಥಾನ ಮಾನಗಳಿಗೆ ತಕ್ಕಂತೆ  ಯೋಜನಾಬದ್ದವಾಗಿ   ಬಿಡಾರ  ನಿರ್ಮಾಣ ಮಾಡಿ ಮಹಾನವಮಿ  ಹಬ್ಬದಲ್ಲಿ   ಅವರುಗಳಿಗೆ ವ್ಯವಸ್ಥಿತವಾಗಿ  ನೀಡಲಾಗುತ್ತಿತ್ತು. 

ಇಷ್ಟೆಲ್ಲಾ  ವ್ಯವಸ್ಥೆ  ಪೂರ್ಣಗೊಳ್ಳುತ್ತಿದ್ದಂತೆ  ಮಹಾನವಮಿಯ ಆಗಮನ ವಾಗುತ್ತಿತ್ತು  ರಾಜಧಾನಿ ಶ್ರೀ ರಂಗಪಟ್ಟಣ  ವಿವಿಧ  ಪ್ರಾಂತದ  ಜನರಿಂದ   ತುಂಬಿ ಹೋಗುತ್ತಿತ್ತು. ವಿವಿಧ     ಪ್ರಾಂತಗಳ ವೇಷ ಭೂಷಣಗಳ  ಜನರು  ಕಾಣಲು ಸಿಗುತ್ತಿದ್ದರು.  ಮಹಾನವಮಿ ಹಬ್ಬದ  ಮೊದಲ ದಿನ  ಇಡೀ ಅರಮನೆಯಲ್ಲಿ , ಅಶ್ವ ಶಾಲೆ, ಗಜ ಶಾಲೆ,  ಆಯುಧ ಶಾಲೆ  ಗಳಲ್ಲಿ    ವೇದ ಪಂಡಿತರಿಂದ  ಮಂತ್ರಗಳ ಘೋಷಣೆಗಳೊಂದಿಗೆ  ರಾಜ  ಪುರೋಹಿತರು   ಪುಣ್ಯಾವರ್ಚನೆ  ಮಾಡುತ್ತಿದ್ದರು,  ನಂತರ   ರಾಜ ಮನೆತನದ   ಚಾಮುಂಡಿಯನ್ನು    ಆವಾಹಿಸಿ   ಯಜ್ಞ ಯಾಗಗಳನ್ನು, ಚಂಡಿಕಾ ಹೋಮ ಇತ್ಯಾದಿ  ಪೂಜೆಗಳನ್ನು  ಮಾಡಲಾಗುತ್ತಿತ್ತು. ಪ್ರತಿನಿತ್ಯವೂ  ಮಹಾನವಮಿಗೆ ಆಗಮಿಸಿದ್ದ ಎಲ್ಲ  ಜನರಿಗೂ  ಊಟದ  ವ್ಯವಸ್ಥೆ  ಮಾಡಲಾಗುತ್ತಿತ್ತು,  ಎಲ್ಲರೂ  ಸಂತೃಪ್ತಿಯಿಂದ  ಖುಷಿಯಾಗಿ ಮಹಾನವಮಿ ಹಬ್ಬದಲ್ಲಿ ಭಾಗವಹಿಸುತ್ತಿದ್ದರು. ಮೊದಲ 8 ದಿನಗಳು  ಶ್ರೀ ಕಂಠೀರವ ನರಸರಾಜ ಒಡೆಯರ್  ರವರು ಬೆಳಿಗ್ಗೆ ಹಾಗು ಸಂಜೆ  ದಿನಕ್ಕೆ ಎರಡು ಸಾರಿಯಂತೆ   ಸಾರ್ವಜನಿಕ  ದರ್ಭಾರ್  ನಡೆಸುತ್ತಿದ್ದರು   ಇದನ್ನು ಮಹಾನವಮಿ ಒಡ್ಡೋಲಗ  ಎಂದು ಕರೆಯಲಾಗುತ್ತಿತ್ತು.      ಶ್ರೀರಂಗಪಟ್ಟಣದ  ಆದಿದೇವರು ಶ್ರೀ ರಂಗನಾಥ ಸ್ವಾಮಿ , ಅರಸರ ಮೆಚ್ಚಿನ  ದೇವರು ಶ್ರೀ ಲಕ್ಷ್ಮಿ ನರಸಿಂಹ ದೇವರುಗಳ   ಉತ್ಸವ ಮೂರ್ತಿಗಳನ್ನು ವೇಧ ಘೋಷಣೆ, ಮಂಗಳ ವಾಧ್ಯಗಳ  ಮೆರವಣಿಗೆ ಮೂಲಕ    ಅರಮನೆಯಾ ದರ್ಭಾರ್  ಸಭಾಂಗಣಕ್ಕೆ  ತಂದು  ಅಲ್ಲಿ  ವಿಶೇಷವಾಗಿ  ರತ್ನಾಭರಣ ಗಳಿಂದ ಅಲಂಕರಿಸಿ  ಇಡಲಾಗುತ್ತಿದ್ದ   ಚಿನ್ನದ ಸಿಂಹಾಸನದಲ್ಲಿ   ಇಡಲಾಗುತ್ತಿತ್ತು.   ಆ ನಂತರ   ದಳವಾಯಿ ಲಿಂಗರಾಜಯ್ಯ  ರಾಜ ಲಾಂಛನದ   ವಸ್ತ್ರಧರಿಸಿ ,   ಪರಾಕು ಹೇಳುವ  ಜನರಿಂದ ಪರಾಕು ಹೇಳಿಸುತ್ತಾ  ಶ್ರೀ ಕಂಠೀರವ ನರಸರಾಜ ಒಡೆಯರ್  ಅವರನ್ನು ಆಹ್ವಾನ ಮಾಡುತ್ತಾ   ಮಹಾನವಮಿಯ ರಾಜ ಒಡ್ಡೋಲಗಕ್ಕೆ   ಕರೆತರುತ್ತಿದ್ದರು,   ಛತ್ರ ಛಾಮರಗಳ  ,   ರಾಜ ಲಾಂಛನ , ರಾಜ ಬಾವುಟಗಳ  ಮರ್ಯಾದೆಯೊಂದಿಗೆ     ಮಂಗಳ ವಾದ್ಯಗಳೊಡನೆ   ಪಲ್ಲಕಿಯಲ್ಲಿ ಆಗಮಿಸಿದ ಶ್ರೀ ಕಂಠೀರವ ನರಸರಾಜ ಒಡೆಯರ್  ರವರು  ಮೊದಲು ಮನೆದೇವರು ತಾಯಿ ಚಾಮುಂಡಿ,  ಶ್ರೀ ರಂಗನಾಥ,  ಲಕ್ಷ್ಮಿ ನರಸಿಂಹ  ದೇವರುಗಳಿಗೆ  ಭಕ್ತಿಯಿಂದ   ಪೂಜಿಸಿ , ಆನಂತರ   ಸಿಂಹಾಸನ ಅಲಂಕಾರ ಮಾಡುತ್ತಿದ್ದರು.   ಆ ದರ್ಭಾರ್  ಸಭಾಂಗಣದಲ್ಲಿ  ವಿವಿಧ ಬಗೆಯ  ಪ್ರಮುಖ   ರಾಜರು,  ಅಧಿಕಾರಿಗಳು, ವಿದ್ವಾಂಸರು, ಕಲಾವಿದರು, ಇನ್ನು ಮುಂತಾದವರ  ಗೌರವಕ್ಕೆ ಚ್ಯುತಿ ಬಾರದಂತೆ  ಆಸನ ವ್ಯವಸ್ಥೆ  ಮಾಡಲಾಗಿರುತ್ತಿತ್ತು.  ವಿವಿಧ   ರಾಜ್ಯಗಳ / ಸೀಮೆಯ     ಗೆಳೆಯರ ಅಥವಾ ಸಾಮಂತ  ರಾಜರುಗಳಿಂದ ಉಡುಗೊರೆ ಅಥವಾ ಕಪ್ಪ ಕಾಣಿಕೆಗಳ ಸಮರ್ಪಣೆ   ಆಗುತ್ತಿತ್ತು, ಮೊದಲ ದಿನದ ಕಾರ್ಯ  ಪರಸ್ಪರ ಪರಿಚಯ ಹಾಗು  ಕಪ್ಪ ಕಾಣಿಕೆಗಳ  ಸಮರ್ಪಣೆ  ಇದರ ಜೊತೆಗೆ ಮನರಂಜನೆ  ಕಾರ್ಯಕ್ರಮಗಳು  ಇವುಗಳಲ್ಲೇ ಕಳೆದು ಹೋಗುತ್ತಿತ್ತು. ರಾತ್ರಿವೇಳೆಯಲ್ಲಿ   ಅರಮನೆ ಹಾಗು ಶ್ರೀರಂಗಪಟ್ಟಣ  ನಗರವನ್ನು    ಲಕ್ಷಾಂತರ  ಕಂದಿಲುಗಳಿಂದ, ಪಂಜುಗಳಿಂದ ,  ವಿವಿಧ ಬಗೆಯ  ಎಣ್ಣೆ ದೀಪಗಳಿಂದ    ಅಲಂಕಾರ ಮಾಡಲಾಗುತ್ತಿತ್ತು, ಶ್ರೀ ರಂಗಪಟ್ಟಣ  ಅರಮನೆ   ಅಂದು  ದೀಪಗಳ ಬೆಳಕಿನ   ರಂಗಿನೊಡನೆ  ಹೊಸ  ರಂಗು ಪಡೆದು   ದೀಪಗಳ  ದ್ವೀಪವಾಗಿ  ಕಂಗೊಳಿಸುತ್ತಿತ್ತು. 


ನಂತರದ ದಿನಗಳಲ್ಲಿ    ಸೈನಿಕ ಕವಾಯತು, ಗಜ ಪಡೆಯ ಮಾವುತರು, ವಿವಿಧಬಗೆಯ  ಯುದ್ದ ದಳಗಳಗಳಿಂದ , ನಾಯಕರುಗಳಿಂದ  ಗೌರವ  ಸಮರ್ಪಣೆ, ಮಲ್ಲರುಗಳಿಂದ ಕುಸ್ತಿ ಕಾಳಗ, ಮಹಾನ್ ಜಟ್ಟಿಗಳಿಂದ  ಜೋಡಿ ಕಾಳಗ, ಗಜಗಳ  ಕಾಳಗ, ಮದ್ದಾನೆಗಳೊಂದಿಗೆ ,  ಕೆರಳಿದ  ಹುಲಿಗಳೊಂದಿಗೆ  ಹಾಗು ಕರಡಿಗಳೊಂದಿಗೆ  ವೀರ ಜನರ  ಕಾಳಗ,    ದೊಣ್ಣೆ ವರೆಸೆ, ಕತ್ತಿ ವರೆಸೆ,  ಕೊಲಾಟ, ದೊಡ್ಡಾಟ,  ದೊಂಬರ  ಆಟಗಳು, ಇಂದ್ರ ಜಾಲ,  ವಿವಿಧ  ಬಗೆಯ ಸಂಗೀತ  ವಿದ್ವಾಂಸರಿಂದ  ಸಂಗೀತ  ಗಾಯನ, ಸಂಗೀತ  ಸ್ಪರ್ಧೆ , ನೃತ್ಯಗಾರರಿಂದ  ಬಗೆ ಬಗೆಯ ನೃತ್ಯ ಪ್ರದರ್ಶನ,   ಪೌರಾಣಿಕ  ನಾಟಕಗಳ   ಪ್ರದರ್ಶನ,  ಕವಿಗಳ  ಪಾಂಡಿತ್ಯ ಪ್ರದರ್ಶನ,    ಹೀಗೆ ಬಗೆ ಬಗೆಯ  ಕಾರ್ಯಕ್ರಮಗಳು  ಮಹಾನವಮಿಯ  8  ದಿನಗಳು  ನಡೆಯುತ್ತಿದ್ದವು, ನಂತರ  ಪ್ರತಿಭಾವಂತರನ್ನು  ಅವರ ಪ್ರತಿಭೆಗೆ  ತಕ್ಕಂತೆ    ಅರಮನೆ  ಆಸ್ಥಾನದ   ಮರ್ಯಾದೆಯೊಂದಿಗೆ   ಫಲ, ತಾಂಬೂಲ, ಭಕ್ಷಿಸು, ಉಡುಗೊರೆ, ಇವುಗಳಿಂದ  ಸನ್ಮಾನ ಮಾಡಲಾಗುತ್ತಿತ್ತು
ಶ್ರೀ ರಂಗಪಟ್ಟಣದ  ಲಕ್ಷ್ಮಿ ನರಸಿಂಹ  ದೇವಾಲಯದಲ್ಲಿರುವ  ಶ್ರೀ ಕಂಠೀರವ ನರಸರಾಜ ಒಡೆಯರ್  ಪ್ರತಿಮೆ ಮಹಾನವಮಿಯ  9 ನೆಯ ದಿನ   ಆಯುಧ ಪೂಜೆ ಕಾರ್ಯಕ್ರಮ  ಅಲಂಕಾರ ಮಾಡಲಾದ  ಆಯುಧ ಶಾಲೆಯಲ್ಲಿ    ಕತ್ತಿ, ಗುರಾಣಿ,  ಖಡ್ಗ , ಈಟಿ, ಬಿಲ್ಲು ಬಾಣಗಳು,  ರಥಗಳು,  ಅಶ್ವಗಳು, ಗಜಗಳು, ಇವುಗಳನ್ನು ಶುಚಿಗೊಳಿಸಿ, ಅಲಂಕಾರ ಮಾಡಿ,  ವ್ಯವಸ್ಥಿತವಾಗಿ  ಸಿದ್ದತೆ ಮಾಡಿಕೊಂಡು    ಅರಮನೆಯ   ಆಯುಧ ಪೂಜೆಯ ಮಂಟಪಕ್ಕೆ  ಮೆರವಣಿಗೆ ಮೂಲಕ ತರಲಾಗುತ್ತಿತ್ತು , ಶ್ರೀ ಕಂಠೀರವ ನರಸರಾಜ ಒಡೆಯರ್   ರವರು  ಆಯುಧ   ಪೂಜೆ ಮಂಟಪಕ್ಕೆ  ಆಗಮಿಸಿ   ಆಯುಧಗಳಿಗೆ , ಗಜಗಳಿಗೆ, ಅಶ್ವಗಳಿಗೆ    ಗೌರವದಿಂದ ಪೂಜೆ   ಸಲ್ಲಿಸುತ್ತಿದ್ದರು. ತದನಂತರ  ದುರ್ಗಾ ಜಪ, ಚಂಡಿಕಾ ಹೋಮ, ನಡೆದು  , ಸಂಗೀತ ನೃತ್ಯ  ಕಾರ್ಯಕ್ರಮಗಳಿಂದ   ಆ ದಿನ  ಸಂಪನ್ನವಾಗುತ್ತಿತ್ತು. ಹತ್ತನೆಯ ದಿನವೇ  ವಿಜಯದಶಮಿ , ಆ ದಿನ  ಶ್ರೀ ಕಂಠೀರವ ನರಸರಾಜ ಒಡೆಯರ್   ರವರು  ನಸುಕಿನಲ್ಲಿಯೇ ಎದ್ದು, ತಮ್ಮ  ಪ್ರಾತಃ  ಕರ್ಮಗಳನ್ನು ಮುಗಿಸಿ , ವಿವಿಧ  ಪುಣ್ಯ ಕ್ಷೇತ್ರಗಳ ಪುಣ್ಯ  ನದಿಗಳಿಂದ   ತರಲಾಗಿದ್ದ  ಜಲತೀರ್ಥದಿಂದ   ಸ್ನಾನ ಮಾಡಿ, ಶ್ರೀ ರಂಗನಾಥ , ಶ್ರೀ ಲಕ್ಷ್ಮಿ ನರಸಿಂಹ   ದೇವರುಗಳನ್ನು    ಪೂಜಿಸಿ      ಸಾಮ್ರಾಜ್ಯದ ವಿವಿಧ  ನದಿಗಳಿಂದ   ತರಲಾಗಿದ್ದ  ಜಲ ತೀರ್ಥವನ್ನು ಸ್ವೀಕರಿಸಿ ,   ನಂತರ  ವೇದಘೋಶಗಳಿಂದ  ಚಂಡಿಕಾ  ಪೂಜೆ  ಮಾಡಿ   ಕುಂಬಳಕಾಯಿ  ಒಡೆದು ಪೂಜೆಯನ್ನು  ಅಂತಿಮ ಗೊಳಿಸಲಾಗುತ್ತಿತ್ತು. ಅಂದು ಮಹಾರಾಜರು  ಶ್ರೀರಂಗಪಟ್ಟಣದ  ರಾಜ ಬೀದಿಯಲ್ಲಿ    ಸಾರ್ವಜನಿಕವಾಗಿ  ಜಂಬೂ ಸವಾರಿ ಮೆರವಣಿಗೆ  ಮೂಲಕ  ತೆರಳಿ ಅಂದು ಸಂಜೆ    ಶಮಿಪೂಜೆ  ನೆರವೆರಿಸಬೇಕಾದ  ದಿನ. ಅದರ  ಉಸ್ತುವಾರಿ ಹಾಗು ನಿರ್ವಹಣೆ   ಶ್ರೀ ರಂಗಪಟ್ಟಣದ  ರಾಜ ಪ್ರಮುಖ  ಅಥವಾ ಮೇಯರ್  ಲಿಂಗೇಗೌಡರದು.   ,     ರಾಜಧಾನಿ ಶ್ರೀ ರಂಗಪಟ್ಟಣದ   ಗಡಿಯ ಹೊರಗೆ ಪೂರ್ವಕ್ಕೆ  ಮೂರು ಮೈಲು  ದೂರದಲ್ಲಿ  ಇದ್ದ   ಶಮಿ ಮರದ   ಬಳಿ  ರಾಜರು ಶಮಿ[ ಬನ್ನಿ ಮರ ]  ಪೂಜೆಮಾಡಲು  ಅಲಂಕೃತ  ಮಂಟಪ ನಿರ್ಮಿಸಲಾಗುತ್ತಿತ್ತು.  ಅಂದು    ವಿಜಯ ದಶಮಿ ಪೂಜೆ ಯನ್ನು   ಅರಮನೆಯಲ್ಲಿ  ಮುಗಿಸಿ  ಅಂದು ಮದ್ಯಾಹ್ನ  ಮಹಾನವಮಿ ಜಂಬೂ ಸವಾರಿ ಮೆರವಣಿಗೆಗೆ  ಸಿದ್ದತೆ ಮಾಡಿಕೊಳ್ಳಲಾಗುತ್ತಿತ್ತು,   ನಂತರ ಜಂಬೂಸವಾರಿ  ಮೆರವಣಿಗೆ ರಾಜ ಬೀದಿಯಲ್ಲಿ  ಸಾಗುವ ಮುನ್ನ ಪರಿಶೀಲನೆ ನಡೆಸಿ, ಜಂಬೂಸವಾರಿ ಮೆರವಣಿಗೆಯನ್ನು ಪ್ರಾರಂಭಿಸಲಾಗುತ್ತಿತ್ತು.  ಅರಮನೆಯಿಂದ   ಶಮಿಪೂಜೆ ಮಾಡುವ  ಸ್ಥಳದ ವರೆಗಿನ  ಬೀದಿಗಳಲ್ಲಿ ಎರಡೂ ಬದಿಯಲ್ಲಿ  ಕಿಕ್ಕಿರಿದ  ಜನ ಸಾಗರದ ನಡುವೆ   ಅದ್ದೂರಿಯ ಜಂಬೂ ಸವಾರಿ ಸಾಗುತ್ತಿತ್ತು.  ವಿಜಯ ದಶಮಿಯ ಸಂಪ್ರದಾಯದಂತೆ  ಅರಮನೆಯ  ಜ್ಯೋತಿಷಿಗಳು  ನಿರ್ಧಾರ ಮಾಡಿದ  ಪುಣ್ಯ ಕಾಲದಲ್ಲಿ       ಶ್ರೀ ರಂಗನಾಥ  ಸ್ವಾಮಿ, ಹಾಗು  ಶ್ರೀ ನರಸಿಂಹ  ಸ್ವಾಮಿಗಳ ಉತ್ಸವ ಮೂರ್ತಿಗಳನ್ನು  ಸಕಲ ಗೌರವಗಳೊಂದಿಗೆ   ಮೆರವಣಿಗೆ ಮೂಲಕ ಶಮಿ ಮಂಟಪಕ್ಕೆ   ಒಯ್ಯಲಾಗುತ್ತಿತ್ತು. ನಂತರ ಶ್ರೀ ಕಂಠೀರವ ನರಸರಾಜ ಒಡೆಯರ್ ರವರು ಜಂಬೂ ಸವಾರಿ ಮೂಲಕ  ಶಮಿ ಪೂಜೆಗೆ ತೆರಳುತ್ತಿದ್ದರು.   ಮೈಸೂರು ಸಮ್ರಾಜ್ಯದ   ರಾಜ ಲಾಂಛನ, ಬಾವುಟಗಳು,  ಸೈನಿಕ ಕವಾಯತು, ಕುದುರೆ ಸಾಲು, ಆನೆ ಸಾಲು, ವಿವಿಧ ಬಗೆಯ ರಥಗಳು, ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಪಲ್ಲಕ್ಕಿ,  ಮುಂತಾದವುಗಳೊಂದಿಗೆ   ಮಿತ್ರ ರಾಜರು, ಸಾಮಂತ  ರಾಜರು,  ನಾಯಕರು, ಪಾಳೆಯ ಗಾರರು , ಮಂತ್ರಿಗಳು,  ರ ಸಮೇತವಾಗಿ   ರಾಜ ಗಾಂಭೀರ್ಯದ  ದೊಡ್ಡ ಆನೆಯ   ಅಂಬಾರಿಯಲ್ಲಿ  ಕುಳಿತು ಶ್ರೀ ಕಂಠೀರವ ನರಸರಾಜ ಒಡೆಯರ್ ರವರು    ಪ್ರಜೆಗಳೆಲ್ಲರ ಗೌರವ ಸ್ವೀಕರಿಸುತ್ತಾ    ಶಮಿ ಪೂಜೆಗೆ  ಜಂಬೂ ಸವಾರಿ ಹೋಗುತ್ತಿದ್ದರು. ಶಮಿ ಮಂಟಪದಲ್ಲಿ  ಇಷ್ಟ ದೇವತೆಗಳಾದ ರಂಗನಾಥ ಸ್ವಾಮಿ, ನರಸಿಂಹ ಸ್ವಾಮಿ  ಗಳಿಗೆ ಗೌರವ ಸಮರ್ಪಿಸಿ  ಶಮಿ ಪೂಜೆ  ಅಂದರೆ ಬನ್ನಿ ಮರದ ಪೂಜಾ ಕಾರ್ಯ  ನೆರವೇರಿಸಿ     ರಂಗನಾಥ ಸ್ವಾಮಿ, ನರಸಿಂಹ ಸ್ವಾಮಿ, ಉತ್ಸವ ಮೂರ್ತಿಗಳು ಹಾಗು ಬನ್ನಿ ಮರಕ್ಕೆ   ಕರ್ಪೂರ ಮಂಗಳಾರತಿಗಳನ್ನು  ಮಾಡಲಾಗುತ್ತಿತ್ತು. . ನಂತರ ಸೈನಿಕ  ತುಕುಡಿಗಳ  ವಿಸರ್ಜನೆಗೆ   ದಳವಾಯಿಗೆ   ಆದೇಶ ಮಾಡಲಾಗುತ್ತಿತ್ತು.  ಅಲ್ಲಿಗೆ    ಹತ್ತುದಿನಗಳ ಕಾಲ ನಡೆದ ವೈಭವದ  ಮಹಾನವಮಿ    ಉತ್ಸವಕ್ಕೆ  ಅಧಿಕೃತವಾಗಿ   ತೆರೆ ಬೀಳುತ್ತಿತ್ತು.    ಬನ್ನಿ ಮರದ ಪೂಜೆಯ ನಂತರ   ತಡ ರಾತ್ರಿ   ಮಹಾರಾಜರು    ಅರಮನೆಗೆ   ವಾಪಸ್ಸು ಬಂದು  ವಿಶ್ರಾಂತಿ ಪಡೆಯುತ್ತಾ ಇದ್ದರು.  ನಂತರ ಮಾರನೆಯ ದಿನ ರಾಜಾಜ್ಞೆಯಂತೆ    ವಿವಿಧ  ರಾಜರುಗಳ  ಸಂಸ್ಥಾನದಿಂದ ಆಗಮಿಸಿ ಮಹಾನವಮಿಯಲ್ಲಿ ಭಾಗವಹಿಸಿದ  ಕಲಾವಿದರು, ಜಟ್ಟಿಗಳು, ಕವಿಗಳು, ಕೋವಿದರು, ಸೈನಿಕರು, ನಾಯಕರು, ವಿದ್ವಾಂಸರುಗಳು  ಇನ್ನೂ ಹಲವಾರು ಬಗೆಯ  ಗಣ್ಯರನ್ನು  ಮೈಸೂರು  ಸಾಮ್ರಾಜ್ಯದ   ಸಂಪ್ರದಾಯದಂತೆ   ಅರಮನೆಯ  ವತಿಯಿಂದ  ಗೌರವಿಸಿ   ಬೀಳ್ಕೊಡಲಾಗುತ್ತಿತ್ತು.    ಸಂತೃಪ್ತಿ ಹೊಂದಿದ   ಎಲ್ಲರೂ ಶ್ರೀ ಕಂಠೀರವ ನರಸರಾಜ ಒಡೆಯರ್  ರವರ  ಗುಣಗಾನ ಮಾಡುತ್ತಾ  ಮಹಾನವಮಿ ಹಬ್ಬವನ್ನು ಕೊಂಡಾಡುತ್ತಾ  ರಾಜಧಾನಿ  ಶ್ರೀ ರಂಗಪಟ್ಟಣ ದಿಂದ  ನಿರ್ಗಮಿಸುತ್ತಿದ್ದರು.  ಅಲ್ಲಿಗೆ  ಮೈಸೂರು ಸಾಮ್ರಾಜ್ಯದ  ಮಹಾನವಮಿ  ಆಚರಣೆ  ಮುಕ್ತಾಯಗೊಳ್ಳುತ್ತಿತ್ತು.  ಆ ನಂತರ   ನಡೆದ  ಮಹಾನವಮಿ  ಹಬ್ಬದ ಆಚರಣೆಯಲ್ಲಿ ಕಾಲಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆ ಕಂಡಿದೆ. 

ಮೈಸೂರು ಸಾಮ್ರಾಜ್ಯದ  ರಾಜಧಾನಿ ಶ್ರೀ ರಂಗ ಪಟ್ಟಣದ  ದಸರಾ ಆಚರಣೆಯ  ಒಂದು ನೋಟ ತಮ್ಮ ಮುಂದೆ  ನನಗೆ ಲಭ್ಯವಾದ  ಮಾಹಿತಿಗಳ ಆಧಾರದಲ್ಲಿ  ಮಂಡಿಸಿದ್ದೇನೆ. ಇತಿಹಾಸದ ಈ ಪಯಣದಲ್ಲಿ ಜೊತೆ ಗೂಡಿದ ತಮಗೆಲ್ಲಾ  ವಂದಿಸಿ ನನ್ನ ಈ  ಮಾಹಿತಿ ಮುಗಿಸುತ್ತೇನೆ ವಂದನೆಗಳು.  .  ನಿಮ್ಮ ಅನಿಸಿಕೆಗಳನ್ನು  ನನಗೆ ತಿಳಿಸಿ ಪ್ರೋತ್ಸಾಹಿಸಿ. 
Sunday, July 23, 2017

ಅರಿಯದ ಇತಿಹಾಸ ಒಡಲಲ್ಲಿ ಬಚ್ಚಿಕೊಂಡ ಶಿರಸಿಯ ಬನವಾಸಿಪಕ್ಕದ ಗುಡ್ನಾಪುರ ....!

ಗುಡ್ನಾಪುರ ಬಂಗಾರೇಶ್ವರ ದೇಗುಲ

ನಮ್ಮ ಕನ್ನಡ ನಾಡಿನ  ಇತಿಹಾಸದ  ಸೆಳೆತವೆ ಹಾಗೆ ಒಮ್ಮೆ ಬಲೆಯಲ್ಲಿ ಬಿದ್ದರೆ  ನಿಮ್ಮನ್ನು ಸುಮ್ಮನೆ ಇರಲು ಬಿಡೋದಿಲ್ಲ , ನೀವು ಸುಮ್ಮನಿದ್ದರು  ಸಹ ನಮ್ಮ ನಾಡಿನ ಇತಿಹಾಸ  ನಿಮ್ಮನ್ನು  ಬಡಿದೆಬ್ಬಿಸಿ ತನ್ನ ಒಡಲೊಳಗೆ ಸೆಳೆದುಕೊಂಡು  ಅಪ್ಪಿಕೊಂಡು ಬಿಡುತ್ತದೆ.  ನಮ್ಮ ಹೆಮ್ಮೆಯ ಕನ್ನಡ ನಾಡಿನಲ್ಲಿ   ನಮ್ಮನ್ನು  ಕೆಣಕುವ  ಐತಿಹಾಸಿಕ ತಾಣಗಳು  ಬಹಳಷ್ಟಿವೆ , ನಮ್ಮ ಪ್ರೀತಿಯ ಮನಸನ್ನು ಅವುಗಳೆಡೆಗೆ ಸ್ವಲ್ಪ ತಿರುಗಿಸಿದರೆ ಸಾಕು  ನಮ್ಮ ಹೃದಯ ಸಿಂಹಾಸನದಲ್ಲಿ  ಶಾಶ್ವತವಾಗಿ ನೆಲೆಸಿಬಿಡುತ್ತವೆ  ಈ ಐತಿಹಾಸಿಕ  ತಾಣಗಳು. ನಿಜಾ  ನನ್ನನ್ನು  ಎಡಬಿಡದೆ  ಕಾಡುವ ಐತಿಹಾಸಿಕ  ತಾಣಗಳು   ಬಹಳಷ್ಟಿವೆ, ಅಂತಹ ತಾಣಗಳಲ್ಲಿ  ಇತ್ತೀಚಿನದು  ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ  ಬನವಾಸಿ  ಸಮೀಪದ  "ಗುಡ್ನಾಪುರ ".ಗುಡ್ನಾಪುರ ದ ಸುಂದರವಾದ ಕೆರೆ 
ಎರಡುವರ್ಷಗಳ ಹಿಂದೆ  ಶಿರಸಿಯ ಇತಿಹಾಸ  ಸಮ್ಮೇಳನಕ್ಕೆ  ಬಂದಿದ್ದಾಗ  ಕೆಲವು ಗೆಳೆಯರೊಡನೆ ಚರ್ಚಿಸುವಾಗ  ನಮ್ಮ  "ಶಿರಸಿ ಸಿರಿ"  ಪತ್ರಿಕೆಯ  "ಸಚಿನ್"      ಸಾರ್  ಹೇಗೂ ಬನವಾಸಿಗೆ ಹೋಗ್ತೀರಲ್ಲಾ  ಅಲ್ಲೇ ಹತ್ತಿರದಲ್ಲೇ ಗುಡ್ನಾಪುರ   ಅಂತಾ  ಒಂದು ತಾಣ ಇದೆ , ಬಹುಷಃ  ನಿಮಗೆ  ಇಷ್ಟಾ ಆಗುವ ತಾಣ ಅದು ಅಂತಾ   ಆಸೆ ಹುಟ್ಟಿಹಾಕಿದರು . ಇನ್ನೇನು  ಬನವಾಸಿಗೆ ಹೋಗ್ತೀವಲ್ಲಾ  ಗುಡ್ನಾಪುರಕ್ಕೂ  ಹೋಗೋಣಾ ಅಂದ್ರು ಜೊತೆಯಲ್ಲಿದ್ದವರು , ಹೊರಟಿತು ಸವಾರಿ   ಗುಡ್ನಾಪುರಕ್ಕೆ, ಶಿರಸಿಯಿಂದ  ಬನವಾಸಿ ರಸ್ತೆಯಲ್ಲಿ ಕ್ರಮಿಸಿದರೆ   ನಡುವೆ ಸುಮಾರು 18 ಕಿಲೋಮೀಟರು ದೂರದಲ್ಲಿ  ಎಡಕ್ಕೆ ತಿರುಗಿ  ಸ್ವಲ್ಪ ದೂರ ಮಣ್ಣಿನ  ಹಾದಿಯಲ್ಲಿ ಸಾಗಿದರೆ ನಿಮಗೆ ಗುಡ್ನಪುರದ  ಐತಿಹಾಸಿಕ  ತಾಣ ತಲುಪಬಹುದು . ತನ್ನ ಒಡಲಲ್ಲಿ  ಸುಂದರವಾದ ಹಾಗು ವಿಶಾಲವಾದ ಕೆರೆಯನ್ನು  ಅಡಗಿಸಿಕೊಂಡು , ಆ ಕೆರೆಯ ಸುತ್ತಾ  ರಚಿತವಾಗಿರುವ  ಒಂದು ಐತಿಹಾಸಿಕ  ಮಹತ್ವ ಪಡೆದಿರುವ  ಈ ಗುಡ್ನಾಪುರ. ಗುಡ್ನಾಪುರದ  ನಿಸರ್ಗದ  ವಿಶೇಷ ಅಂದ್ರೆ   ಒಂದು ಸುಂದರವಾದ  ವಿಶಾಲವಾದ  ಕೆರೆಯನ್ನು ಹೊಂದಿರುವುದು  , ಅದರ ಸುತ್ತ ಮುತ್ತ  ಹಸಿರಿನ ಗದ್ದೆಗಳು,   ಕೆರೆ ಮತ್ತು ಹಸಿರನ್ನು  ನಂಬಿ ಬದುಕುವ  ಹಲವು ಬಗೆಯ ಪಕ್ಷಿಗಳು . ಕೆರೆಯ ದಂಡೆಯ ಮೇಲೆ   ಆಧುನಿಕ ಶೈಲಿಯ    ಬಂಗಾರೇಶ್ವರ  ದೇವಾಲಯ ಕಂಡು ಬರುತ್ತದೆ.
ಬಂಗಾರೇಶ್ವರ ಸ್ವಾಮಿ ಮೂರ್ತಿ ಗುಡ್ನಾಪುರದ ಕೆರೆಯ ದಡದಲ್ಲಿ  ಬಂಗಾರೇಶ್ವರ, ಕರಿಯಮ್ಮ, ಮರಿಯಮ್ಮ  ಎಂಬ ಮೂರು   ದೇಗುಲಗಳು ಕಂಡುಬರುತ್ತವೆ ಸುತ್ತಮುತ್ತಲಿನ   ಗ್ರಾಮದ    ಗ್ರಾಮಸ್ಥರು / ಅದರಲ್ಲೂ  ಹೆಣ್ಣುಮಕ್ಕಳು  ತಮ್ಮ ಮನೆಯಲ್ಲಿ  ಸಂತಾನ ಪ್ರಾಪ್ತಿಯಾಗದಿದ್ದರೆ  ಈ ದೇಗುಲಗಳಿಗೆ  ತಮ್ಮ ಕುಟುಂಬದಲ್ಲಿ  ಸಂತಾನ ಪ್ರಾಪ್ತಿಯಾದರೆ   ತೊಟ್ಟಿಲನ್ನು ಅರ್ಪಿಸುವ  ಬಗ್ಗೆ  ಹರಕೆ  ಹೊತ್ತುಕೊಳ್ಳುತ್ತಾರೆ  ,    ಹಾಗು ಅದರಂತೆ ಭಕ್ತಿಯಿಂದ  ನಡೆದುಕೊಳ್ಳುವುದಾಗಿ ತಿಳಿದು ಬಂತು. ಈ ಮೂರೂ ದೇವಾಲಯಗಳು  ಗ್ರಾಮದ  ಜನಜೀವನದ ಅಂಗವಾಗಿವೆ. ಇಂತಹ  ಗ್ರಾಮಕ್ಕೆ ಬಂದ ನಮ್ಮನ್ನು  ಕೆಲವು ಗ್ರಾಮಸ್ಥರು  ಪ್ರೀತಿಯಿಂದ  ಬರಮಾಡಿಕೊಂಡರು . ಮೈಸೂರಿ ನವರು ಎಂಬುದನ್ನು ತಿಳಿದು  ಮತ್ತಷ್ಟು  ಆದರದಿಂದ  ನಮ್ಮನ್ನು  ಐತಿಹಾಸಿಕ ಜಾಗಕ್ಕೆ ಕರೆದುಕೊಂಡು ಹೋದರು.ಗುಡ್ನಾಪುರದ  ಪರಿಸರ 


ಇವನ್ಯಾವ್ನ್ರೀ  ಅದ್ಯಾವ್ದೋ  ಇತಿಹಾಸ ಅಂತಾ  ಯಾವ್ದೋ "ಗುಡ್ನಾಪುರ"   ಅನ್ನೋ  ಹಳ್ಳಿಗೆ ಹೋಗಿ   ಬೊಗಳೆ ಹೊಡೀತಾನೆ  ಅನ್ನಬಹುದು ಕೆಲವರು,  ನಿಜಾ ಸಾರ್  ಮೊದಲು ನಾನೂ ಹಾಗೆ ಅನ್ಕೊಂಡಿದ್ದೆ , ಆದ್ರೆ ಈ ಊರಿನ ಬಗ್ಗೆ ಕೆದಕುತ್ತಾ  ಹೋದಾಗ  ಅಚ್ಚರಿ ಎಂಬ  ಇತಿಹಾಸ ಎದ್ದುಬಂತು.   ಬನ್ನಿ ಈ ಊರಿನ ಬಗ್ಗೆ ಸ್ವಲ್ಪ ತಿಳಿಯೋಣ

ಶಿರಸಿ ತಾಲೂಕಿನಲ್ಲಿ  ಇತಿಹಾಸ ಅಂದ್ರೆ  ಬನವಾಸಿ ಅನ್ನೋದು ವಾಡಿಕೆಯಾಗಿತ್ತು, ಸೋಂದಾ , ಶಿರಸಿ, ಸಹಸ್ರಲಿಂಗ , ಮುತ್ತಿನಕೆರೆ,   ಮಂಜುಗುಣಿ, ಯಾಣ, ಕೊಳಗಿ ಬೀಸ್  ಮುಂತಾದ    ತಾಣಗಳು ಐತಿಹಾಸಿಕ ಪುರಾವೆಯನ್ನು ಬಹುಬೇಗ ಪ್ರಕಟಮಾಡಿಕೊಂಡು ಜನರ ಗಮನ ಸೆಳೆದಿದ್ದವು, ಆದರೆ  ಬನವಾಸಿ ಯಿಂದ ಕೇವಲ ಮೂರು ನಾಲ್ಕು ಕಿಲೋಮೀಟರು  ದೂರವಿದ್ದ ಗುಡ್ನಾಪುರ   1988 ರವರೆಗೆ  ತನ್ನ ಇತಿಹಾಸದ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ.  ಬೆಳಗಾವಿ ಜಿಲ್ಲೆಯ  ಖಾನಾಪುರ  ತಾಲೂಕಿನ  ಹಲಸಿಯಲ್ಲಿ   ಗುಡ್ನಾಪುರದ  ಇತಿಹಾಸದ ಬಗ್ಗೆ ಸಿಕ್ಕ  ಕೆಲವು ಆಧಾರಗಳ ಮೇಲೆ  1988  ರಲ್ಲಿ   ಕೇಂದ್ರ ಪ್ರಾಚ್ಯ ವಸ್ತು ಸಂರಕ್ಷಣಾ  ಇಲಾಖೆಯವರು  ಹಾಗು ಕೆಲವು ವಿಧ್ವಾಂಸರು ಇತ್ತ ಗಮನಹರಿಸಿ  1988 ರಿಂದ 1992 ರ ವರೆಗೆ  ಉತ್ಕನನ  ನಡೆಸಿ ,  ಈ ಊರಿನ ಇತಿಹಾಸಕ್ಕೆ ಒಂದು ರೂಪ ಕೊಡುತ್ತಾರೆ,  ಸಂಶೋಧನೆ ಸಮಯದಲ್ಲಿ  ಕಂಡುಬಂದ  ಒಂದು ಶಾಸನ ಸ್ಥಂಬ ಹಾಗು  ಕೆಲವು  ಕಟ್ಟಡಗಳ ಅವಶೇಷಗಳು  ಬನವಾಸಿ ಕದಂಬರ  ಇತಿಹಾಸದ  ಬಗ್ಗೆ ಹೆಚ್ಚಿನ  ಬೆಳಕು ಚೆಲ್ಲಿವೆ.
ಗುಡ್ನಾಪುರ ಇತಿಹಾಸದ ಒಂದು ಅವಶೇಷ 


ನಮಗೆಲ್ಲಾ  ತಿಳಿದಂತೆ  ಮಯೂರ ಶರ್ಮ / ಮಯೂರ ವರ್ಮ  ನಿಂದ ಸ್ಥಾಪಿತವಾದ   ಬನವಾಸಿಯ  ಕದಂಬ  ರಾಜವಂಶ  ಕ್ರಿಸ್ತ  ಶಕ  345–565  ರವರೆಗೆ  ಮೆರೆದದ್ದು    ಇತಿಹಾಸ , ಇದೆ ಅವಧಿಯಲ್ಲಿ  ರಾಜಧಾನಿ  ಬನವಾಸಿಯಾಗಿದ್ದರೂ ಸಹ   ಹಲಸಿ, ಹಾಗು ಗುಡ್ನಾಪುರಗಳೂ ಸಹ   ಆಡಳಿತದಲ್ಲಿ  ಪ್ರಾಮುಖ್ಯತೆ ಪಡೆದ ತಾಣಗಳಾಗಿದ್ದವು, ಜೊತೆಗೆ  ಬನವಾಸಿ ಕದಂಬರ ಕಾಲದಲ್ಲಿ  ಸ್ಥಳೀಯವಾಗಿ  ಬಳಕೆಯಲ್ಲಿದ್ದ  ಕನ್ನಡವನ್ನು  ಆಡಳಿತ ಭಾಷೆ ಯನ್ನಾಗಿ  ಅಳವಡಿಸಿಕೊಳ್ಳಲಾಯಿತು,  ಹಾಗಾಗಿ  ಪ್ರಪ್ರಥಮವಾಗಿ  ಆಡಳಿತ ಭಾಷೆಯನ್ನಾಗಿ ಕನ್ನಡವನ್ನು  ಜಾರಿಗೆ ತಂದವರು ಬನವಾಸಿ ಕದಂಬರು  ಮಾತ್ರ. ಜೊತೆಗೆ ಸಂಸೃತ  ಇದ್ದಿತಾದರೂ  ಹೆಚ್ಚಾಗಿ ಬಳಕೆಯಲ್ಲಿದ್ದುದು  ಕನ್ನಡ ಭಾಷೆ.     ಕದಂಬರ ಕಾಲದಲ್ಲಿ ಅತೀ ಪ್ರಾಮುಖ್ಯತೆ  ಪಡೆದ ಎರಡು ಧರ್ಮಗಳು  ಹಿಂದೂ ಹಾಗು ಜೈನ  ಧರ್ಮಗಳು . ಹಾಗಾಗಿ ಕದಂಬರ ಕಾಲದಲ್ಲಿ ನಮಗೆ ಕಂಡು ಬರುವುದು ದೇವಾಲಯಗಳು ಹಾಗು ಜೈನ ದೇಗುಲಗಳು, ಬಸದಿಗಳು ಇತ್ಯಾದಿ. ಅಂತೆಯೇ ಗುಡ್ನಾಪುರದ ಇತಿಹಾಸ   ಬನವಾಸಿ ಕದಂಬರ  ಕಾಲಕ್ಕೆ  ಸರಿಯಾಗಿ  ಹೊಂದಾಣಿಕೆ ಆಗಿದೆ. ಕದಂಬರ ಇತಿಹಾಸ ತಿಳಿಯಲು ನಮಗೆ  ಶಿವಮೊಗ್ಗ ಜಿಲ್ಲೆಯ ತಾಳಗುಂಡ, ಗುಂಡನೂರು, ಚಿತ್ರದುರ್ಗ ಸಮೀಪದ  ಚಂದ್ರವಳ್ಳಿ,  ಬೆಳಗಾವಿ ಜಿಲ್ಲೆಯ  ಹಲಸಿ,  ಹಾಗು ಹಾಸನ ಜಿಲ್ಲೆಯ ಹಲ್ಮಿಡಿ  ಶಾಸನಗಳು  ಮಾತ್ರ ಸಹಾಯ ಮಾಡುತ್ತವೆ, ಈ ಸ್ಥಳಗಳು ಕದಂಬರ ಆಡಳಿತ ಕಾಲದಲ್ಲಿ  ಹೆಚ್ಚಿನ ಮಹತ್ವ ಪಡೆದ   ಆಡಳಿತಾತ್ಮಕ  ಸ್ಥಳಗಳೆಂದು  ತಿಳಿಯಬಹುದಾಗಿದೆ. ಗುಡ್ನಪುರ ಜೈನ ಮಂದಿರ ಹಾಗು ಅರಮನೆ  ಇದ್ದ ಪ್ರದೇಶಗಳ ಅವಶೇಷ 

  
ದೇಗುಲದ ಒಳಗೆ ಕಂಡುಬರುವ  ಜೈನ ಮೂರ್ತಿ 
ದೇಗುಲದ ಒಳಗೆ ನೆಲಕ್ಕೆ ಒರಗಿರುವ ಮೂರ್ತಿ 

ಶಿಥಿಲಗೊಂಡ   ರತಿ ಮನ್ಮಥ  ಮೂರ್ತಿ

.
ಶಿಥಿಲ ಗೊಂಡ ಗಣಪತಿ .

ದೇಗುಲದ ಒಳಗೆ ಕಲಾತ್ಮಕ  ಕಂಬ 

ಯಾವ  ಐತಿಹಾಸಿಕ ಘಟನೆಯ ಸಾಕ್ಷಿಯೋ   ಮೂಲೆ ಸೇರಿದೆ. ಕದಂಬ  ಅರಸರ  ಪೀಳಿಗೆಯ ಮೊದಲ ದೊರೆ ಮಯೂರ ಶರ್ಮ  ಹಾಗು ಕೊನೆಯ ದೊರೆ  ಕೃಷ್ಣ  ವರ್ಮ ಅಂದರೆ  ಕದಂಬರ ಆಳ್ವಿಕೆ ಕಾಲ ಕ್ರಿಸ್ತ  ಶಕ  345–565  ರವರೆಗೆ ನಡೆಯಿತು,  ಕ್ರಿಸ್ತ ಶಕ  345  ಕ್ರಮವಾಗಿ, ಮಯೂರಶರ್ಮ , ಬಗಿತರ್ಹ ,ರಘು, ಕಕುತ್ಸವರ್ಮ , ಶಾಂತಿವರ್ಮ , ಮ್ರಿಗೇಶವರ್ಮ , ಶಿವಮಂದತಿ ವರ್ಮ, ರವಿವರ್ಮ , ನಂತರ  ತ್ರಿಪರ್ವತ  ಶಾಖೆಯಿಂದ , ಕೃಷ್ಣ ವರ್ಮ 1, ವಿಷ್ಣುವರ್ಮ, ಸಿಂಹ ವರ್ಮ,  ನಂತರ   ಕದಂಬ ವಂಶದ ಕೊನೆಯ  ದೊರೆ ಕೃಷ್ಣ ವರ್ಮ2  ಮೊದಲು  ಹಿಂದೂ ಧರ್ಮ ಪಾಲಿಸಿದ ಕದಂಬರ ಅರಸರುಗಳು  ನಂತರ   ಜೈನ ಧರ್ಮಕ್ಕೆ ಕೂಡಾ ಪ್ರೋತ್ಸಾಹ ಕೊಟ್ಟಿರುವುದು  ಇತಿಹಾಸದ ದಾಖಲೆಗಳಿಂದ ತಿಳಿದು ಬರುತ್ತದೆ .     ಈ ನಡುವೆ  ಕ್ರಿಸ್ತ ಶಕ 485  ರಿಂದ 519 ರವರೆಗೆ  ಬನವಾಸಿಯಲ್ಲಿ ಆಡಳಿತ ನಡೆಸಿದ  ಕದಂಬ ರವಿವರ್ಮ  ಗುಡ್ನಾಪುರದಲ್ಲಿ  ಜೈನ  ಧರ್ಮಕ್ಕೆ ಸೇರಿದಂತೆ ಮನ್ಮಥ ದೇವಾಲಯವನ್ನು ಕಟ್ಟಿಸಿರುವುದಾಗಿ ತಿಳಿದು ಬರುತ್ತದೆ, ಜೊತೆಗೆ ಅದೇ ಕಾಲದಲ್ಲಿ  ದೇವಾಲಯದ ಜೊತೆಗೆ  ರಾಜರ  ಅರಮನೆ  ಸಹ ಇದ್ದಿತೆಂದು ತಿಳಿದು ಬರುತ್ತದೆ , ಇದನ್ನು  ಪುಷ್ಟೀಕರಿಸುವ  ಸಾಕ್ಷಿಗಳನ್ನು ಇಂದಿಗೂ ಸಹ ನಾವು ಕಾಣಬಹುದು, ಶಿವಮಂದತಿ ವರ್ಮ ಹಾಗು ಆನಂತರ   ರವಿವರ್ಮ   ಜೈನ ಧರ್ಮವನ್ನು ಪಾಲಿಸಿರುವುದು   ಕಂಡುಬರುತ್ತದೆ.  ಹಾಗಾಗಿ  ಗುಡ್ನಾಪುರದಲ್ಲಿ  ಜೈನ ಧರ್ಮಕ್ಕೆ   ಅನುಗುಣವಾಗಿ   ಬೆಳವಣಿಗೆಗಳು ಕಂಡುಬಂದಿವೆ.  ಈ ದೇಗುಲವನ್ನು   ಗುರುತಿಸುವ ಬಗ್ಗೆ   ಎರಡುಬಗೆಯ ದ್ವಂದ್ವ  ಕಂಡುಬರುತ್ತದೆ.  ಈ ದೇಗುಲವನ್ನು ರತಿ   ಮನ್ಮತ ದೇಗುಲವೆಂದು ಕರೆಯುತ್ತಿದ್ದರೆಂದೂ  ಹೇಳಲಾಗುತ್ತದೆ, ಅದಕ್ಕೆ ಪೂರಕವಾಗಿ ಇಲ್ಲಿ ವಸಂತೋತ್ಸವ  ಹಬ್ಬದ ಆಚರಣೆ ಇತ್ತೆಂದು  ಹೇಳುವ ಒಂದು ವಾದವಿದೆ, ಇನ್ನೊಂದು ವಾದ  ಮನ್ಮಥ ಅಂದರೆ ಜೈನ ಧರ್ಮದಲ್ಲಿ  ಬಾಹುಬಲಿ ಎಂಬ ಅರ್ಥ ವಿದೆ  ಹಾಗಾಗಿ ಇದು  ಮನ್ಮಥ  ಮಂದಿರ ಅಂದರೆ ಬಾಹುಬಲಿ ಗೆ ಅರ್ಪಿತವಾದ ಮಂದಿರ ಎನ್ನಲಾಗುತ್ತಿದೆ. ಇದರಲ್ಲಿ ಯಾವುದು ಸರಿ ಯಾವುದು ತಪ್ಪು  ಎಂಬ ಬಗ್ಗೆ ಸ್ಪಷ್ಟ  ಚಿತ್ರಣ ಸಿಗಬೇಕಿದೆ. ನಂತರ  ಇದೆ ಪ್ರದೇಶದಲ್ಲಿ  ರವಿವರ್ಮನ  ಕಾಲದ ಬ್ರಾಹ್ಮೀ ಲಿಪಿಯ ಐತಿಹಾಸಿಕ ಶಾಸನ ಕಂಡು ಬರುತ್ತದೆ. 

ರವಿವರ್ಮನ ಶಾಸನ ಸ್ಥಂಬ


  ಬ್ರಾಹ್ಮಿ  ಲಿಪಿಯ ಶಾಸನ ಗ್ರಾಮಸ್ಥರ  ನೆರವಿನೊಂದಿಗೆ ಗುಡ್ನಾಪುರದ ಐತಿಹಾಸಿಕ  ಸ್ಥಳಕ್ಕೆ ಬಂದ ನಮಗೆ  ಮೊದಲು ದರ್ಶನ ಕೊಟ್ಟಿದ್ದು  ಒಂದು ಶಾಸನ ಸ್ತಂಭ , ಶಿಥಿಲವಾಗಿದ್ದ ಅದಕ್ಕೆ  ರಕ್ಷಣೆಗಾಗಿ  ನಿಲ್ಲಿಸಿದ  ಕಬ್ಬಿಣದ  ಸರಳುಗಳು  ಹಾಗು ಸ್ಮಾರಕಕ್ಕೆ  ನೆರಳು ನೀಡಲು  ಒಂದು ಶೀಟಿನ  ಚಾವಣಿ .  ಹತ್ತಿರ  ನಡೆದು ನೋಡಿದಾಗ   ಗೋಚರಿಸಿದ್ದು ಸ್ಥಂಬದ  ನಾಲ್ಕೂ ಬದಿಯಲ್ಲಿ  ಚಪ್ಪಟೆ ಆಕಾರದ  ಜಾಗದಲ್ಲಿ  ಶಾಸನ ರಚನೆ , ಮತ್ತಷ್ಟು ಹತ್ತಿರ ಹೋಗಿ ನೋಡಿದಾಗ  ಆ ಶಾಸನದ ಕೆಲವು ಸಾಲುಗಳು, ಅಕ್ಷರಗಳು ವಿರೂಪವಾಗಿದ್ದವು.  ನಂತರ ನನ್ನ ಕ್ಯಾಮರದಲ್ಲಿ ಕೆಲವು ಚಿತ್ರಗಳನ್ನು ತೆಗೆದು  ಐತಿಹಾಸಿಕ  ದಾಖಲೆಗಳ  ಪರಿಶೀಲನೆ   ಮಾಡಿದಾಗ  ಕದಂಬ ದೊರೆ ರವಿವರ್ಮನು  ಚೈತ್ರಮಾಸದಲ್ಲಿ ಜರುಗಿದ   ಮನ್ಮತೋತ್ಸವದ  ಅಥವಾ ವಸಂತೋತ್ಸವದ  ಸಂದರ್ಭ ದಲ್ಲಿ  ಮನ್ಮತ ದೇಗುಲವನ್ನು ನಿರ್ಮಾಣ ಮಾಡಿದನೆಂದು ತಿಳಿಸಿ, ಹಲವು ಧಾರ್ಮಿಕ ಕಾರ್ಯಕ್ರಮಗಳಿಗಾಗಿ  ನೀಡಿದ ದತ್ತಿಯನ್ನು,  ಗುಡ್ನಾಪುರದ [ ಅಂದಿನ ಗುಡ್ಡ ತಟಾಕ ] ಕೆರೆಯನ್ನು ಕಟ್ಟಿಸಿದ ಬಗ್ಗೆ  ಹಾಗು  ಕದಂಬರ ವಶಾವಳಿಯ ಉಲ್ಲೇಖ ವಿರುವುದಾಗಿ ತಿಳಿದುಬರುತ್ತದೆ. ಈ ಶಾಸನದ ಅಚ್ಚರಿಯೆಂದರೆ  ಗುಡ್ನಾಪುರದ  ಕೆರೆಯನ್ನು   ಕದಂಬರ ಆಳ್ವಿಕೆಕಾಲದಲ್ಲಿ  ಗುಡ್ಡದ ತಟಾಕ  ಎನ್ನುತ್ತಿದ್ದುದು. ಜೊತೆಗೆ  ಆ ಕೆರೆ ಕದಂಬರ  ಬಳುವಳಿ ಎಂಬುದು  ಸಹ  ಹೆಮ್ಮೆಯ ವಿಚಾರ.   ಆದಿ ಕವಿ ಪಂಪನೂ  ಸಹ ತನ್ನ ಕಾವ್ಯಗಳಲ್ಲಿ   ವಸಂತೋತ್ಸವದ  ಬಗ್ಗೆ ಉಲ್ಲೇಖ ಮಾಡಿದ್ದು,   ಈ ತಾಣ  ಬನವಾಸಿಯ ಬಹಳ ಸಮೀಪವೇ ಇರುವ  ಕಾರಣ, ಗುಡ್ನಾಪುರಕ್ಕೂ  ಪಂಪನ   ಆಗಮನವಾಗಿತ್ತು ಎಂಬುದು ನಿರ್ವಿವಾದ.  ಕದಂಬರ ಕೊಡುಗೆ ಈ ಸುಂದರವಾದ  ಗುಡ್ನಾಪುರದ ಕೆರೆ 


 ಶಾಸನ  ಸ್ತಂಭ ನೋಡಿಕೊಂಡು ಮುಂದೆ ಬಂದ ನಮಗೆ ಗೋಚರಿಸಿದ್ದು , ವಿಶಾಲವಾದ ಪ್ರದೇಶದಲ್ಲಿ  ಹರಡಿದ್ದ ಐತಿಹಾಸಿಕ  ಅರಮನೆ ಹಾಗು   ದೇಗುಲದ  ಅವಶೇಷಗಳು . ದಪ್ಪನಾದ  ಇಟ್ಟಿಗೆ , ಗಡುಸಾದ ಮಣ್ಣು,   ಅಂದಿನ ಕಾಲದಲ್ಲಿ  ತಯಾರಾಗುತ್ತಿದ್ದ  ಗಾರೆ ಗಚ್ಚು  ಗಳನ್ನೂ ಬಳಸಿ  ಕಟ್ಟಿದ್ದ  ಈ ಅರಮನೆ ಹಾಗು ದೇಗುಲ  ಗತಕಾಲದ  ತಾಂತ್ರಿಕತೆಯ  ಕೌಶಲದ  ಗುಟ್ಟನ್ನು ತನ್ನೊಳಗೆ  ಅಡಗಿಸಿಕೊಂಡಿವೆ. 

ದೇಗುಲದ ದರ್ಶನ 


ಅವಶೇಷಗಳನ್ನು ದಾಟಿಕೊಂಡು  ಒಂದು ಎತ್ತರದ  ಜಾಗದಲ್ಲಿದ್ದ  ದೇಗುಲವನ್ನು  ಪ್ರವೇಶ ಮಾಡಿದೆವು,  ದೇಗುಲದ ಒಳಗೆ ನಮಗೆ ಜೈನ ಧರ್ಮದ  ಹಾಗೂ  ಹಿಂದೂ ಧರ್ಮದ  ಶಿಥಿಲಗೊಂಡ   ಮೂರ್ತಿಗಳು ಕಂಡುಬರುತ್ತವೆ.  ಮೊದಲು ಈ ದೇಗುಲ ಜೈನ ದೇಗುಲವಾಗಿದ್ದು ಕಾಲಾನಂತರ ವೀರಭದ್ರ ದೇವಾಲಯವಾಗಿ  ಪರಿವರ್ತಿತಗೊಂಡಿರುವುದು  ಕಾಣಸಿಗುತ್ತದೆ. ಆ ದೇಗುಲದಲ್ಲಿ    ಗರ್ಭಗೃಹ, ಅರ್ಧಮಂಟಪ, ನವರಂಗ , ಕಾಣಸಿಕ್ಕರೂ  ಎಲ್ಲೆಡೆಯೂ  ಶಿಥಿಲವಾದ  ಮೂರ್ತಿಗಳಿಂದ   ತನ್ನ ಅಂದ ಕಳೆದುಕೊಂಡಿವೆ,  ದೇಗುಲದ ಒಳಗಡೆ ಸುಂದರ ಕಂಬಗಳೂ ಸಹ  ತಮ್ಮ ಅಂದ ಕಳೆದುಕೊಳ್ಳುತ್ತಾ ಇವೆ. ಎತ್ತರದ ತ್ರದೆಶದಲ್ಲಿರುವ ದೇವಾಲಯದಿಂದ  ಹೊರಬಂದರೆ ನಿಮಗೆ ದೇವಾಲಯದ ಸುತ್ತಾ  ಅರಮನೆ ಇದ್ದ ಬಗ್ಗೆ  ಅವಶೇಷಗಳು ಗೋಚರಿಸುತ್ತವೆ. ಅಂದಿನ ದಿನಗಳಲ್ಲಿ ಕದಂಬರ  ಆಡಳಿತದ  ಭಾಗವಾಗಿದ್ದ ಈ ಅರಮನೆ  ಎಷ್ಟು ಸುಸಜ್ಜಿತವಾಗಿತ್ತು ಎಂಬ ಬಗ್ಗೆ ಕಲ್ಪಿಸಿಕೊಂಡರೆ  ನಿಜಕ್ಕೂ ಅಚ್ಚರಿಯಾಗುತ್ತದೆ. 

ಅರಮನೆಯ ಅವಶೇಷ ..1ಗುಡ್ನಾಪುರದ ಕೆರೆಯ ದಂಡೆಯ ಮೇಲಿತ್ತು ಅರಮನೆ 
ಹೌದು ಕದಂಬರ ಕಾಲದಲ್ಲಿ ಬನವಾಸಿಗೆ ಎಷ್ಟು ಪ್ರಾಮುಖ್ಯತೆ  ಇತ್ತೋ ಅಷ್ಟೇ ಪ್ರಾಮುಖ್ಯತೆ   ಗುಡ್ನಾಪುರಕ್ಕೂ ಇತ್ತೆಂದು ಕಾಣುತ್ತದೆ,  ಬನವಾಸಿಯಿಂದ  ಕೇವಲ ಮೂರು ಕಿಲೋಮೀಟರು  ಇರುವ ಈ ಪ್ರದೇಶ  ಕದಂಬರ  ಆಡಳಿತ ಕೇಂದ್ರ ಆಗಿರುವ ಎಲ್ಲ ಸಾಧ್ಯತೆಗಳನ್ನು  ಕಡೆಗಣಿಸುವಂತಿಲ್ಲ, ಹಾಗಾಗಿ ಇಲ್ಲಿ  ಗುಡ್ನಾಪುರ  ಕೆರೆಯ   ದಡದಲ್ಲಿ  ವಸಂತೋತ್ಸವ  ದ ಅಂಗವಾಗಿ  ರತಿ ಮನ್ಮಥ  ದೇವಾಲಯ ನಿರ್ಮಾಣ ಮಾಡಿದ್ದ ಕದಂಬರು  ಗುಡ್ನಾಪುರದಲ್ಲಿ   ಆಡಳಿತದ  ಅಂಗವಾಗಿ   ಅರಮನೆ ಕಟ್ಟಿದ್ದರೆಂಬುದು  ಇಲ್ಲಿನ ಅವಶೇಷಗಳ  ವಿವರಗಳನ್ನು  ಐತಿಹಾಸಿಕ ದಾಖಲೆಗಳೊಂದಿಗೆ  ತಾಳೆಮಾಡಿದಲ್ಲಿ  ಕಂಡುಬರುತ್ತದೆ.


 ಶತಮಾನಗಳ  ಇತಿಹಾಸದ  ಸಾಕ್ಷಿ ಈ ಹಳೆಯ ಮರ  ಹಾಗು ಅದರ ಪಕ್ಕದಲ್ಲಿ ಕಾಣುವ  ಕೆರೆ. 


ಆದರೆ ಕಾಲಾನಂತರ  "ಗುಡ್ನಾಪುರದ ಇತಿಹಾಸ"  ತನ್ನ ಗತ ವೈಭವಗಳನ್ನು ಕಳೆದುಕೊಂಡು , ಬನವಾಸಿಯ ಸನಿಹ ಇದ್ದರೂ  ಬನವಾಸಿಯಂತೆ  ಮೆರೆದಾಡದೆ  , ಸದ್ದಿಲ್ಲದೇ   ಮರೆಯಾಗಿಬಿಟ್ಟಿತು.  ಇಂದಿಗೂ   ತನ್ನ ಗತ ವೈಭವಕ್ಕೆ ಆದ ಗಾಯವನ್ನು  ವಾಸಿಮಾಡಿಕೊಳ್ಳಲು ಆಗದೆ  ನಿಟ್ಟುಸಿರು ಬಿಡುತ್ತಾ   ಮಲಗಿಬಿಟ್ಟಿದೆ.  ನಿಜಾ  ಈ ಎಲ್ಲಾ  ಇತಿಹಾಸದ ಸಾಕ್ಷಿಯಾಗಿ  ಗುಡ್ನಾಪುರದ ಕೆರೆ ,   ಇದನ್ನೆಲ್ಲಾ  ಕಾಣುತ್ತಾ  ಒಮ್ಮೆಲೇ ಯಾವುದೋ ನೋವಿನ  ಲೋಕದೊಳಗೆ   ಮುಳುಗಿ ಹೋಗಿದ್ದ    ನಾನು  ಎಚ್ಚರ ಗೊಂಡಿದ್ದು,  ಆ ಹಳ್ಳಿಗರ  ಮಾತಿಗೆ . 
ಬೇಲಿ ಹಾಕಿದ  ಇತಿಹಾಸಕ್ಕೆ  ಪ್ರೀತಿಯ ಕಾವಲು ನಿಂತ ಗ್ರಾಮಸ್ಥರು 


ಸಾರ್ ಬಹಳ  ದೂರದಿಂದ ಬಂದಿದ್ದೀರಿ ನಮಗೆ  ತುಂಬಾ  ಸಂತೋಷ ಆಯ್ತು , ಎನ್ನುತ್ತಾ  ನಮ್ಮ  ತಂಡವನ್ನು   ಐತಿಹಾಸಿಕ ಪ್ರದೇಶದ  ಪ್ರವೇಶ ದ್ವಾರದ ವರೆಗೂ ಬಂದು   ಪ್ರೀತಿಯಿಂದ  ಬೀಳ್ಕೊಟ್ಟರು.  ನನಗೋ  ಒಂದೆಡೆ  ಐತಿಹಾಸಿಕ   ಪ್ರದೇಶ ನೋಡಿದ  ಸಂತಸ ಮತ್ತೊಂದೆಡೆ ನರಳುತ್ತಿರುವ ಇತಿಹಾಸಕ್ಕೆ  ಸಾಂತ್ವನ ಹೇಳಲಾಗದ  ಸಂಕಟ.  ಭಾರವಾದ  ಹೃದಯದೊಡನೆ ನಿಟ್ಟುಸಿರು ಬಿಡುತ್ತಾ    ಅಲ್ಲಿಂದ ಹೊರಡಲು  ಸಿದ್ಧನಾದೆ , ದೂರದಲ್ಲಿ ಬೇಲಿ ಹಾಕಿದ  ಇತಿಹಾಸಕ್ಕೆ  ಪ್ರೀತಿಯ ಕಾವಲು ನಿಂತ ಗ್ರಾಮಸ್ಥರು  ಇತಿಹಾಸದ ಕಣ್ಣೀರು ಒರೆಸಲಾರದೆ    ನಿಟ್ಟುಸಿರು ಬಿಡುತ್ತಾ   ನಿಂತರು.  ನಿಜವಾಗಿಯೂ  ಇತಿಹಾಸವನ್ನು  ನಿರ್ಲಕ್ಷಿಸದೆ  ಉಳಿಸಿಕೊಂಡಲ್ಲಿ   ನಮ್ಮ ನಾಡಿನ ಸಂಸ್ಕೃತಿ  ಮತ್ತಷ್ಟು ಹೆಚ್ಚುತ್ತದೆ  , ಅದರ ಅರಿವು ಮೂಡಿಸುವ ಕಾರ್ಯ   ಹೆಮ್ಮೆಯ ಕನ್ನಡಿಗರಾದ  ಎಲ್ಲರಿಂದಲೂ ಆಗಲಿ ಎಂಬ  ಆಸೆಯೊಡನೆ,  ಅಲ್ಲಿಂದ ತೆರಳಿ ಬನವಾಸಿಯಲ್ಲಿ  ಸ್ವಲ್ಪ ಸಮಯ ಕಳೆದು   ತರಾತುರಿಯಿಂದ    ಶಿರಸಿಯತ್ತ  ಮುಖ ಮಾಡಿದೆ.  ಕಟ್  ಮಾಡಿದ್ರೆ  ಶಿರಸಿಯ  ಸತ್ಕಾರ್ ಹೋಟೆಲ್ನಲ್ಲಿ     ಮುಂದೆ ಕುಳಿತ ಮಸಾಲೆ ದೋಸೆ  ನನ್ನ ಇತಿಹಾಸ ಅಜ್ಞಾನವನ್ನು ಕಂಡು ಅಣಕಿಸಿ  ಕಿಸಿಕ್ ಅಂತೂ .........! 
   [ ಈ ಲೇಖನ ಬರೆಯುವಾಗ   ದಾಖಲೆ ಪರಿಶೀಲನೆ ವೇಳೆಯಲ್ಲಿ ಉಂಟಾದ ಹಲವಾರು  ಅನುಮಾನಗಳನ್ನು  ಶ್ರೀ ಲಕ್ಷ್ಮೀಶ್ ಹೆಗ್ಡೆ ಸೋಂದ  ಅವರ  ನೆರವಿನೊಂದಿಗೆ ಪರಿಹರಿಸಿಕೊಂಡಿದ್ದೇನೆ,  ಸಲಹೆ ಹಾಗು ಮಾರ್ಗ ದರ್ಶನ  ನೀಡಿದ ಲಕ್ಷ್ಮೀಶ್ ಹೆಗ್ಡೆ ಅವರನ್ನು ಕೃತಜ್ಞತೆಯಿಂದ   ಸ್ಮರಿಸಿಕೊಳ್ಳುತ್ತೇನೆ ] 

Sunday, July 16, 2017

ಸೋತವನು ಒಮ್ಮೆ ಗೆದ್ದೇಗೆಲ್ಲುತ್ತಾನೆ. .........! ಸೋಲು ಎಂದಿಗೂ ಸಾವಿಗೆ ದಾರಿಯಲ್ಲ

ಹಾರುವ ಹಕ್ಕಿಗೂ ಸಹ  ಬದುಕಿನ  ಸತ್ಯದ ಅರಿವಿದೆ ಮಸ್ಕಾರ  ಎಲ್ಲರಿಗೂ  , ಮತ್ತೊಮ್ಮೆ ಬ್ಲಾಗ್  ಕಡೆಗೆ  ಮುಖ ಮಾಡಿದ್ದೇನೆ,  ನಮ್ಮ ಮಾತುಗಳನ್ನು , ನಮ್ಮ ವಿಚಾರಗಳನ್ನು  ಎಲ್ಲರೊಡನೆ  ಹಂಚಿಕೊಂಡಾಗ  ಆಗುವ ತೃಪ್ತಿಯೇ ಬೇರೆ. ಜೀವನಪಯಣದಲ್ಲಿ  ಒಮ್ಮೊಮ್ಮೆ  ಏರು ಪೇರುಗಳು  ಇರುತ್ತವೆ  ಅದಕ್ಕೆ ಜೀವನ ಅನ್ನೋದು, ಜೀವನದಲ್ಲಿ  ಕಹಿಯ ರುಚಿ  ಗೊತ್ತಿಲ್ಲದಿದ್ದರೆ  ಸಿಹಿಯ ಬೆಲೆ ತಿಳಿಯೋದು  ಹ್ಯಾಗೆ ಆಲ್ವಾ...?  ಅದೇ ರೀತಿ  ಜೀವನದಲ್ಲಿ  ಸೋಲಿನ ರುಚಿಯ ಅನುಭವ ಪಡೆಯದೇ   ಗೆಲುವಿನ  ರುಚಿ  ಸಿಹಿಯಾಗಿರಲು ಸಾಧ್ಯವಿಲ್ಲಾ.....!   "ಸೋತವನು ಒಮ್ಮೆ ಗೆದ್ದೇಗೆಲ್ಲುತ್ತಾನೆ. .........! ಸೋಲು ಎಂದಿಗೂ ಸಾವಿಗೆ ದಾರಿಯಲ್ಲ"  ಇವೆಲ್ಲಾ  ಸತ್ಯಗಳೂ  ಗೊತ್ತಿದ್ದೂ ಸಹ ಒಮ್ಮೊಮ್ಮೆ  ಮನುಷ್ಯ  ತಾಳ್ಮೆಗೆಟ್ಟು  ದುಡುಕಿನ ನಿರ್ಧಾರ ಕೈಗೊಳ್ಳುತ್ತಾನೆ   ಅದಕ್ಕೆ ಬಹಳಷ್ಟು  ಕಾರಣಗಳು ಸಹ ಇರುತ್ತವೆ  ಬದುಕಿನ  ವೈಪಲ್ಯತೆ , ಆಕಸ್ಮಿಕ ಘಟನೆಗಳು,  ಅಸಹಾಯಕತೆ, ನೋವು, ಹತಾಶೆ ,  ಸುತ್ತ ಮುತ್ತಲಿನ  ಜನರಿಂದ ಅವಮಾನ , ತನಗೆ ಒದಗಿಬಂದಿರುವ  ಕಷ್ಟಗಳನ್ನು ಪರಿಹರಿಸಿಕೊಳ್ಳಲು  ಯಾವುದೇ ದಾರಿ ಕಾಣದಾಗ , ಬಂಧು ಬಳಗಗಳಿಂದ , ಗೆಳೆಯರಿಂದ ತಾತ್ಸಾರಕ್ಕೆ ಸಿಲುಕಿದಾಗ , ಎಲ್ಲರೂ ತನ್ನನ್ನು ನಿರ್ಲಕ್ಷ   ಮಾಡ್ತಾ  ಇದ್ದಾರೆ  ನನ್ನ ಗೋಳನ್ನು  ಕೇಳುವವರು ಯಾರೂ ಇಲ್ಲಾ  ಅನ್ನಿಸಿದಾಗ , ಅಸಹನೀಯವಾದ  ಅನಾರೋಗ್ಯ ಗಳಿಂದ  ನೋವಿನಿಂದ  ಬಳಲುವಾಗ , ಹಾಗು ಇಂತಹ ಇನ್ನೂ ಬಹಳಷ್ಟು  ವಿವಿಧ ಕಾರಣಗಳಿಂದ  ತನ್ನ  ಸಾವನ್ನು ತಾನೇ ಬಯಸಿಕೊಳ್ಳುತ್ತಾನೆ,     ಸಿನಿಮ ಜಗತ್ತಿನ  ಹೀರೋ  ಆಗಿದ್ದವನೂ ಸಹ  ಜೀವನದಲ್ಲಿ ಸೋತಿದ್ದ [ ಚಿತ್ರ ಕೃಪೆ  ಶ್ರೀ.ಬಿ.ಸಿ. ನಾಗೇಂದ್ರ ] 


ಹೌದಲ್ವಾ  ಎಲ್ಲರಿಗೂ ಒಮ್ಮೊಮ್ಮೆ ಹೀಗೆ ಅನ್ನಿಸಿರುತ್ತದೆ, ಕೆಲವರು  ತಮ್ಮ ಮನೋಬಲದಿಂದ ಇಂತಹ ಪರಿಸ್ಥಿತಿಗಳನ್ನು  ಗೆದ್ದುಬರುತ್ತಾರೆ, ಮತ್ತೆ  ಕೆಲವರು  ಹತಾಶರಾಗದೆ  ತಮ್ಮ ಆತ್ಮೀಯರ  ಸಲಹೆ ಸಹಾಯ ಪಡೆದು ಜೀವನದ  ಸೋಲನ್ನು  ಗೆದ್ದು ಬರುತ್ತಾರೆ , ಆದರೆ  ಇದ್ಯಾವುದು ಸಿಗದೇ ನಿರ್ಲಕ್ಷಕ್ಕೆ  ಒಳಗಾಗಿ  ಬದುಕನ್ನು  ಕಳೆದುಕೊಳ್ಳುವ  ಜನ  ನಮ್ಮ  ಆತ್ಮೀಯರಲ್ಲೇ ಇರುತ್ತಾರೆ , ಅಥವಾ  ನಮ್ಮ ಸುತ್ತ ಮುತ್ತಲೇ ಇರುತ್ತಾರೆ  , ಇಂತಹವರಿಗೆ  ಆತ್ಮೀಯರಾಗಿ  ತಮ್ಮನ್ನು ಸಂತೈಸುವ ಒಂದು  ಒಳ್ಳೆಯ ಹೃದಯವಂತ  ವ್ಯಕ್ತಿ,  ತಮ್ಮ  ಸಮಸ್ಯೆಗಳಿಗೆ/ ನೋವಿನ  ಮಾತುಗಳಿಗೆ  ಕಿವಿಯಾಗಿ  ಹಾಗು ಅದಕ್ಕೆ  ಉತ್ತರವಾಗಿ   ಸ್ಪಂದಿಸುವ  ವ್ಯಕ್ತಿಗಳ  ಅವಶ್ಯಕತೆ ಇರುತ್ತದೆ, ಆದರೆ  ಗೊತ್ತಿದ್ದೋ, ಗೊತ್ತಿಲ್ಲದೆಯೋ, ಅಥವಾ ದಿನಾ ಸಾಯೋವವರಿಗೆ  ಅಳುವವರು ಯಾರು  ಎಂಬ  ದೋರಣೆಯಿಂದ ಅವರನ್ನು ನಿರ್ಲಕ್ಷ  ಮಾಡುವ ಕಾರಣ, "ಅಯ್ಯೋ ಇಂದಿನ  ಬದುಕಿನ ಜಂಜಾಟದಲ್ಲಿ  ನಮ್ಮದೇ ನಮಗೆ ಇನ್ನೂ ಇದನ್ನೆಲ್ಲಾ  ಯಾರ್ ಮಾಡ್ತಾರೆ  ಹೋಗ್ರೀ...."  "ಅವರು ಮಾಡಿದ ಪಾಪ ಅವರು ಅನುಭವಿಸಲಿ ನಮಗ್ಯಾಕೆ  ಇದೆಲ್ಲಾ ಉಸಾಬರಿ "   ಅನ್ನುವ  ಮನಸ್ಥಿತಿಗಳಿಂದ  ಅ ಸುತ್ತ ಮುತ್ತ ಇರುವ  ಹತಾಶ ಜೀವಗಳಿಗೆ  ಬದುಕಿನ ದಾರಿಯನ್ನು  ಮತ್ತೆ ತೋರಿಸುವ   ಕೆಲಸಗಳನ್ನು  ನಾವು ಮಾಡುತ್ತಿಲ್ಲ  ಅನ್ಸುತ್ತೆ. ಹಾಗಾಗಿ ಕೆಲವೊಮ್ಮೆ  ಗೊತ್ತಿಲ್ಲದೆಯೋ / ಗೊತ್ತಿದ್ದೋ  ನಿರ್ಲಕ್ಷಕ್ಕೆ  ಒಳಗಾಗಿ   ಇಂತಹವರು  ಬದುಕನ್ನು  ಅಂತ್ಯ ಮಾಡಿಕೊಂಡಾಗ  ನಾವೇ   ವೇದಾಂತ  ಹೇಳುತ್ತಾ  ಸತ್ತವನನ್ನು  ಬಯ್ಯುತ್ತೇವೆ. ಜಗತ್ತನ್ನೇ ನಗಿಸಿದವನು ಸಹ  ಜೀವನದಲ್ಲಿ   ಬಹಳ  ನೋವು ತಿಂದು  ಅತ್ತಿದ್ದ [ ಚಿತ್ರ ಕೃಪೆ  ಅಂತರ್ಜಲ] ಬದುಕು ಅನ್ನೋದು  ದಿನದಿಂದ  ದಿನಕ್ಕೆ , ವರ್ಷದಿಂದ ವರ್ಷಕ್ಕೆ  ಬದಲಾಗುತ್ತಿರುತ್ತದೆ, ವೈಜ್ಞಾನಿಕ  ಆವಿಷ್ಕಾರಗಳು  ಹೆಚ್ಚಿದಂತೆ  ಜೀವನ  ಸುಖವನ್ನು ಬಯಸುತ್ತದೆ , ಅದಕ್ಕೆ ತಕ್ಕಂತೆ ಜೀವನ ಶೈಲಿಯೂ ಸಹ  ಬದಲಾಗಿ  ಬದುಕಿನ ಮೇಲೆ ಒತ್ತಡ  ಜಾಸ್ತಿಯಾಗುತ್ತಾ  ವಾಸ್ತವತೆಯನ್ನು ಅರ್ಥಮಾಡಿಕೊಳ್ಳದೆ  ಮನುಷ್ಯ  ಕೆಲವೊಮ್ಮೆ  ಬದುಕಿನಲ್ಲಿ   ಎಡವುತ್ತಾನೆ, ಇದಕ್ಕೆ ಇಂತಹದೆ ಕಾರಣಾ  ಅಂತಿಲ್ಲ , ಯಾವ ಕಾರಣ ಬೇಕಾದರೂ ಆಗಿರಬಹುದು. ಆದರೆ  ತನ್ನ  ಸುತ್ತ ಮುತ್ತಲಿನ ವಾಸ್ತವತೆಯನ್ನು  ಅರಿಯದೆ  ಭ್ರಮೆಯಲ್ಲಿ  ಬದುಕಿದಾಗ ಇಂತಹ  ಅಚಾತುರ್ಯ  ಆಗಿಬಿಡುತ್ತದೆ . ಬದುಕಿನ ನಿರ್ವಹಣೆ ಬಗ್ಗೆ ಯಾವ ಶಾಲೆ/ ಕಾಲೇಜುಗಳು/  ವಿಶ್ವ ವಿಧ್ಯಾಲಯಗಳೂ ಕೂಡ  ನಮಗೆ ಕಲಿಸಿಕೊಡಲಾರವು,  ಇದಕ್ಕೆ ಸಾಕ್ಷಿಯಾಗಿ ನಮ್ಮ ಸುತ್ತ ಮುತ್ತಲಿನ  ಹಲವಾರು  ದೊಡ್ಡ  ದೊಡ್ಡ ಪದವಿ ಪಡೆದ  ಜನ  ಜೀವನ ನಿರ್ವಹಣೆಯಲ್ಲಿ ಸೋತಿರೋದನ್ನು  ಗಮನಿಸಬಹುದು .ನಮ್ಮ ಜೀವನ ಹಸನಾಗಲು  ನಮ್ಮ ಜೀವನದಲ್ಲಿ  ಅನುಭವಿಸುವ ಸೋಲುಗಳೇ   ವಿಶ್ವ ವಿಧ್ಯಾನಿಲಯಗಳಾಗಿ   ಪಾಠ ಕಲಿಸುತ್ತವೆ,   ಆದರೆ  ಜೀವನದ ಸೋಲನ್ನು  ಒಪ್ಪಿಕೊಳ್ಳುವ , ವಿಮರ್ಶಿಸುವ , ಅದಕ್ಕೆ   ಉತ್ತರ ಕಂಡುಕೊಳ್ಳುವಲ್ಲಿ  ನಾವು ಬಹಳಷ್ಟು   ವಿಚಾರಗಳನ್ನು  ಬದುಕಿನಲ್ಲಿ ಕಲಿಯಬೇಕಿದೆ, ಹಾಗು ನಮ್ಮ ಆತ್ಮೀಯರಿಗೂ ಸಹ  ಕಲಿಸಬೇಕಿದೆ. 
ಚಾರ್ಲ್ಸ್  ದಾರ್ವಿನ್  ಸಿದ್ದಾಂತವನ್ನು  ಬಿಟ್ಟಿಲ್ಲ  ಬದುಕಿನ ಸತ್ಯ 


ನಮ್ಮ ಆತ್ಮೀಯರಲ್ಲಿ ಕಂಡುಬರುವ  ಹತಾಶ ವ್ಯಕ್ತಿಗಳು ಎದುರಿಸುತ್ತಿರುವ  ಸಮಸ್ಯೆ ಗಳಿಗೆ  ಒಂದು ಪ್ರೀತಿಯ  ಮಾತು, ಒಂದು  ಸಾಂತ್ವನದ ಮಾತು, "ನೀನು ಹೆದರಬೇಡ  ಮುನ್ನುಗ್ಗು" ಎಂಬ ಭರವಸೆ, "ಹೆದರ ಬೇಡ  ಧೈರ್ಯವಾಗಿ ನಿನ್ನ ಮನಸಿನ ನೋವನ್ನು ನನ್ನಲ್ಲಿ  ಹೇಳಿಕೋ  ಇಬ್ಬರೂ ಸೇರಿ ಉತ್ತರ ಹುಡುಕೋಣ ಸಮಸ್ಯೆಗೆ"   ಅನ್ನೋ  ಮಾತುಗಳು  ಹಲವಾರು ವ್ಯಕ್ತಿಗಳ ಬದುಕಿಗೆ  ಸಂಜೀವಿನಿಯಾಗಿ  ಅವರ ಬದುಕು ಹಸನಾಗಿಬಿಡುತ್ತದೆ . ... ಆದರೆ  ನಾವು ಮಾಡ್ತಿರೋದೆನು.....?    ಯಾರೋ  ಆತ್ಮೀಯರು  / ನೆಂಟರು/ ಗೆಳೆಯರು,  ಬದುಕಿನಲ್ಲಿ  ಅಸಹಾಯಕರಾಗಿ  ಹತಾಶರಾದಾಗ   ಅವರ ತಪ್ಪುಗಳನ್ನು ಟೀಕಿಸುತ್ತಾ , ಅವರ ಜೀವನ ಶೈಲಿಯನ್ನು ವಿಮರ್ಶೆ ಮಾಡುತ್ತಾ , ಅವರ  ಬಗ್ಗೆ  ಅಪಹಾಸ್ಯ  ಮಾಡುತ್ತಾ   ನಾವೇ ಗ್ರೇಟ್  ಅನ್ನೋಹಾಗೆ ವರ್ತಿಸೋದು , ಹತಾಶರಾಗಿ ನೋವು ಅನುಭವಿಸುವವರನ್ನು     ನಿರ್ಲಕ್ಷ  ಮಾಡೋದು  ಯಾವ ನ್ಯಾಯ ಆಲ್ವಾ...  ! ಇಂತಹ ಗುಣಗಳು  ನಮಗೆ ಸಹಜವಾಗಿ ಬದುಕಿನಲ್ಲಿ ಬಂದುಬಿಟ್ಟಿರುತ್ತವೆ  ಆದರೆ ಇದನ್ನು   ಸರಿಪಡಿಸ್ಕೊಂಡು  ನಿಂತಾಗ  ಇಂತಹ ವಿಚಾರಗಳಿಗೆ ಉತ್ತರ ಸಿಗುತ್ತವೆ.  ಬನ್ನಿ ನಾವೆಲ್ಲಾ  ಹೊಸ ದಿಕ್ಕಿನಲ್ಲಿ ಸಾಗೋಣ.   ''ಬದುಕಿನಲ್ಲಿ ಸೋತವನು ಒಮ್ಮೆ ಗೆದ್ದೇಗೆಲ್ಲುತ್ತಾನೆ'' . .........!   ''ಸೋಲು ಎಂದಿಗೂ ಸಾವಿಗೆ ದಾರಿಯಲ್ಲ'' ಎಂಬ ಸತ್ಯವನ್ನು ಸಾರೋಣ,  ಹತಾಶ ಮನಸುಗಳಿಗೆ  ಬದುಕಿನ ಅರ್ಥ ತಿಳಿಸೋಣ,  ಹತಾಶ ಮನಸುಗಳನ್ನು ಸಾಂತ್ವನ ಗೊಳಿಸೋಣ,  ಎಲ್ಲರ ಬದುಕು ಹಸನಾಗಲೆಂದು   ಹಾರೈಸೋಣ  ಏನಂತೀರಾ ... ?  

Sunday, January 8, 2017

ಶಿರಸಿಯಲ್ಲೊಬ್ಬ ಆಧುನಿಕ ಬಿ.ಎಲ್. ರೈಸ್..................! ಸದ್ದಿಲ್ಲದೇ ಇತಿಹಾಸದ ಬೆನ್ನು ಹತ್ತಿದ ಸಾಹಸಿ.ಶ್ರೀ  ಲಕ್ಷ್ಮೀಶ್ ಹೆಗ್ಡೆ  ಶಿರಸಿಯಲ್ಲೊಬ್ಬ  ಆಧುನಿಕ  ಬಿ.ಎಲ್. ರೈಸ್   ನನಗೆ   ಒಬ್ಬರನ್ನು ಅನವಶ್ಯಕವಾಗಿ  ಹೊಗಳೋದು  ಆಗಿಬರಲ್ಲಾ,  ಹಾಗಾಗಿ  ಆದಷ್ಟು  ವ್ಯಕ್ತಿಗಳ  ಬಗ್ಗೆ  ನನ್ನ ಬ್ಲಾಗ್ನಲ್ಲಿ  ಬರಹಗಳು ಕಡಿಮೆ ಇರುತ್ತದೆ. ಆದರೂ  ಕೆಲವೊಮ್ಮೆ  ಕೆಲವು ಮಹನೀಯರು  ತಮ್ಮ   ಸಾಧನೆಗಳಿಂದ  ನನ್ನ  ಮನಸಿನಲ್ಲಿ  ನಿಂತುಬಿಡುತ್ತಾರೆ. ಇನ್ನು ಅಂತಹವರ   ಜ್ಞಾನ  ಭಂಡಾರ  ಕಂಡು ನಾನು  ಮೂಕ ವಿಸ್ಮಿತನಾಗಿಬಿಡುತ್ತೇನೆ  . ಅಂತಹ ಒಬ್ಬ   ಅಪರೂಪದ   ವ್ಯಕ್ತಿಯನ್ನು  ನನ್ನ ಬ್ಲಾಗಿನ  ಆವರಣಕ್ಕೆ ಕರೆ   ತಂದು ಅವರ ಪರಿಚಯ   ಮಾಡಿಕೊಡಲು  ನಿಜಕ್ಕೂ   ಸಂತಸ ಪಡುತ್ತೇನೆ.ಆಗಿನ್ನೂ ಶಿರಸಿಗೆ  ಬಹಳ ವರ್ಷಗಳ ನಂತರ  ಹೊರಟ ಸಮಯ ,  ಶಿರಸಿ ಸಮೀಪದ  ಕೊಳಗಿ ಬೀಸ್  ನಲ್ಲಿ   ಶ್ರೀ ಗುರುಮೂರ್ತಿ  ಹೆಗ್ಡೆ  ಅವರ ಸಹೋದರನ  ವಿವಾಹಕ್ಕೆ   ಆಮಂತ್ರಣವಿತ್ತು, ಹೊರಡುವ ಮುಂಚೆ ಆಪ್ತ  ಮಿತ್ರ  ಪ್ರಕಾಶ್   ಹೆಗ್ಡೆ ಯವರಿಗೆ  ಶಿರಸಿ ಇತಿಹಾಸ  ತಿಳಿದವರ   ಬಗ್ಗೆ  ಮಾಹಿತಿ ಕೊಡುವಂತೆ  ಪೀಡಿಸಿದೆ , ಪಾಪ  ಅವರೂ ಸಹ   ತಮಗೆ ತಿಳಿದ  ಹಲವಾರು   ವ್ಯಕ್ತಿಗಳ  ವಿವರ ಕೊಟ್ಟರು ಆದರೆ  ಆ ಸಮಯದಲ್ಲಿ  ಶಿರಸಿ  ಮಾರಿಕಾಂಬೆ ಜಾತ್ರೆ  ಇದ್ದ ಕಾರಣ,  ನನಗೂ ಸಮಯ ಕಡಿಮೆ  ಇದ್ದ  ಕಾರಣ, ಮತ್ತೊಬ್ಬ  ಪ್ರೀತಿಯ ತಮ್ಮ  ಹರ್ಷಹೆಗ್ಡೆ  ಜೊತೆ  ಅಲೆದಾಡಿ  ಶಿರಸಿ  ಸುತ್ತ  ಮುತ್ತ  ಅಲೆದಾಡಿ ಸಾಕಷ್ಟು ಛಾಯಾಚಿತ್ರಗಳು  ಹಾಗು  ಸಿಕ್ಕಷ್ಟು   ಮಾಹಿತಿ   ದೋಚಿಕೊಂಡು  ಬಂದಿದ್ದೆ, ಆಗಿನ್ನೂ  ಶಿರಸಿಯ ಬಗ್ಗೆ ಬ್ಲಾಗ್ ನಲ್ಲಿ ಬರೆಯುವ ಮನಸು ಮಾಡಿರಲಿಲ್ಲ. ಒಂದು ದಿನ ಬ್ಲಾಗ್  ಬರಹಕ್ಕೆ ಏನೂ ವಿಚಾರ ಸಿಗದಿದ್ದಾಗ  ಶಿರಸಿಯ ಛಾಯಾಚಿತ್ರಗಳನ್ನು ನೋಡುತ್ತಾ  ಕುಳಿತೆ. ಸಹಸ್ರಲಿಂಗದ ಛಾಯಾಚಿತ್ರ ನೋಡುತ್ತಾ  ಈ ಪ್ರಾಂತದಲ್ಲಿ  ಏನೋ ವಿಶೇಷ ಇದೆ ಅನ್ನಿಸಿತು. ಅದರಂತೆ ಹುಡುಕಾಟ ನಡೆಸಿ, ಹಳೆ  ಗೆಝೆಟಿಯರ್ ಗಳನ್ನೂ ತಿರುವು ಹಾಕತೊಡಗಿದೆ. ಆಹಾ ಇಷ್ಟೆಲ್ಲಾ ಮಾಹಿತಿ ಇದೆಯಾ ಅನ್ನಿಸಿತು.  ಆದರೂ  ಸ್ಥಳೀಯ ವ್ಯಕ್ತಿಗಳ ಮಾಹಿತಿ ಇದ್ದರೆ ಚೆನ್ನ  ಅನ್ನಿಸಿ  ಹುಡುಕಾಟ ನಡೆಸುತ್ತಿದ್ದಾಗ  ನನಗೆ ಬಹುಮಾನವಾಗಿ ಸಿಕ್ಕವರೇ   ಶ್ರೀ  ಲಕ್ಷ್ಮೀಶ್ ಹೆಗ್ಡೆ  ಅವರು,  ಹೇಗೋ ಸಿಕ್ಕ  ಅವರ  ಮೊಬೈಲ್  ನಂಬರ್ ಗೆ ಕರೆ ಮಾಡಿದಾಗ  ಆತ್ಮೀಯವಾಗಿ ಪರಿಚಯ ಮಾಡಿಕೊಂಡು  ಶಿರಸಿ ಇತಿಹಾಸದ  ಬಗ್ಗೆ ಮೈಸೂರಿನಿಂದ  ಕರೆ  ಮಾಡಿದ್ದಕ್ಕೆ ಹರುಷ  ವ್ಯಕ್ತ ಪಡಿಸಿ.  ಕೆಲವು ಮಾಹಿತಿ ನೀಡಿದರು.  ಅಲ್ಲಿಂದ  ನಮ್ಮಿಬ್ಬರ  ಪರಿಚಯ ಆರಂಭವಾಯಿತು. ಹಲವಾರು ಸಾರಿ  ಶಿರಸಿಗೆ ಬಂದ್ರೂ  ಅವರ ಭೇಟಿಮಾಡಲು ಆಗಿರಲಿಲ್ಲ. ಇತಿಹಾಸ   ಜಾತ್ರೆಯ  ಮೆರವಣಿಗೆಗೆ   ಶಿರಸಿ ಮಾರಿಕಾಂಬೆ ಆಶೀರ್ವಾದ 


ಶಿರಸಿಯ  ಹಲವಾರು ವಿಚಾರಗಳ ಬಗ್ಗೆ  ಮಾಹಿತಿ  ತಿಳಿಯಲು ಇವರನ್ನು ಬಹಳಷ್ಟು ಸಾರಿ ಫೋನ್ ಮೂಲಕ ನಾನು ಕಾಡಿಸಿದ್ದರೂ  ಬೇಸರ ಮಾಡಿಕೊಳ್ಳದೆ, ಇತಿಹಾಸದ  ಮಾಹಿತಿ ನೀಡುತ್ತಿದ್ದ ಇವರನ್ನು ಭೇಟಿಯಾಗುವ ಹಂಬಲ  ಶುರುವಾಯ್ತು. ಅದಕ್ಕೆ ಕಾಲ ಕೂಡಿಬಂದಿದ್ದೆ  ಶಿರಸಿಯಲ್ಲಿ  ಜರುಗಿದ  ರಾಜ್ಯಮಟ್ಟದ  ಇತಿಹಾಸ ಸಮ್ಮೇಳನದಲ್ಲಿ. ನಿಜಕ್ಕೂ ಶಿರಸಿಯಂತಹ  ಒಂದು ತಾಲೂಕು ಕೇಂದ್ರದಲ್ಲಿ  ಒಂದು  ರಾಜ್ಯಮಟ್ಟದಲ್ಲಿ   ಜರುಗುವ  ಕಾರ್ಯಕ್ರಮಕ್ಕಿಂತ  ಶಿಸ್ತು ಬದ್ದವಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ  ಆಯೋಜಿಸಿ  ನಿರ್ವಹಣೆ ಮಾಡಿದ್ದು  ಲಕ್ಷ್ಮೀಶ್ ಹೆಗ್ಡೆಯವರ  ಸಾಹಸಕ್ಕೆ ಸಾಕ್ಷಿ,


ನನಗೂ ಇಷ್ಟಾ  ಶಿರಸಿಯ  ಇತಿಹಾಸ  ಅಂದ್ರೂ ಕಮಲಾ ಹಂ  ಪ. ನಾ . 


ಶಿರಸಿಯ ಸುತ್ತಮುತ್ತ  ಬಹಳಷ್ಟು ಐತಿಹಾಸಿಕ ತಾಣಗಳಿವೆ, ಪ್ರಕೃತಿಯ ಮಡಿಲಲ್ಲಿ   ಅನೇಕ  ಇತಿಹಾಸದ  ಕುರುಹುಗಳನ್ನು ಬಚ್ಚಿಟ್ಟುಕೊಂಡು  ಶಿರಸಿ  ಇತಿಹಾಸಕಾರರಿಗೆ  ಸವಾಲಾಗಿ ನಿಂತಿದೆ. ಇಂತಹ ಇತಿಹಾಸದ ಚಕ್ರವ್ಯೂಹ ಭೇದಿಸುತ್ತ , ರಾಜ್ಯಮಟ್ಟದ ಇತಿಹಾಸ  ಜಾತ್ರೆ  ಏರ್ಪಡಿಸುತ್ತ   ಹಲವಾರು  ದಿಗ್ಗಜರ  ಸಮಕ್ಷಮದಲ್ಲಿ   ನೋಡ್ರಪ್ಪ  ನಮ್ಮೂರ ಇತಿಹಾಸದ ತಾಕತ್ತು ಇದು ಅಂತಾ ತೋರಿಸುವ  ಶ್ರೀ ಲಕ್ಷ್ಮೀಶ್ ಹೆಗ್ಡೆ  ರ    ಛಲಕ್ಕೆ  ಯಾರಾದ್ರೂ ಸೈ  ಅನ್ನಲೇಬೇಕು.  ಶಿರಸಿಯ ಇತಿಹಾಸ  ಹೇಳುವ  ಇವರ ಇತಿಹಾಸ   ಏನೂ ಅಂತಾ  ಕೆದಕಿದಾಗ   ಸಿಕ್ಕಿದ್ದು  ಮತ್ತೊಂದು ಇತಿಹಾಸ .

ಇತಿಹಾಸಕಾರ  ಹಾಗು ಅವರ ಅಂತರಂಗ      {ಚಿತ್ರ ಕೃಪೆ ಲಕ್ಷ್ಮೀಶ್ ಹೆಗ್ಡೆ. } 
ಹೌದ್ರೀ  ಇತಿಹಾಸಕಾರನಿಗೂ ಒಂದು ಇತಿಹಾಸ  ಇರುತ್ತೆ,   ಬನ್ನಿ ಬನ್ನಿ ಹೀಗೆ ...! ಅದೊಂದು ದಿನ   ದಿನಾಂಖ  18 ಫೆಬ್ರವರಿ  1984  ರಂದು ಶಿರಸಿಯ  ಸೋಂದೆ ಸಮೀಪದ  ಬಾಡ್ಲಾ ಕೊಪ್ಪದ    ಶ್ರೀ ರಾಮಚಂದ್ರ ಹೆಗ್ಡೆ  ಹಾಗು ಮಮತಾ ಹೆಗ್ಡೆ ಯವರ ಮನೆಯಲ್ಲಿ  ಸಂಭ್ರಮವೋ ಸಂಭ್ರಮ.  ಅಂದು  ಒಂದು ಗಂಡು ಮಗು  ಅಳುತ್ತಾ  ಅಳುತ್ತಾ  ಐತಿಹಾಸಿಕ  ಸೋಂದಾ  ಪ್ರದೇಶದಲ್ಲಿ  ತನ್ನ ಜನ್ಮ ಪಡೆದಿತ್ತು. ಮನೆಯಲ್ಲಿನ ಹಿರಿಯರ ಪ್ರಭಾವವೋ ಅಥವಾ ಆ ಮಗು ಜನಿಸಿದ  ಮಣ್ಣಿನ  ಗುಣವೋ ಕಾಣೆ  ಆ ಮಗು ಬೆಳೆಯುತ್ತಾ  ಬೆಳೆಯುತ್ತಾ   ಇತಿಹಾಸದ ಕಡೆ  ಆಕರ್ಷಿತನಾಗಿ  ಶಿರಸಿ ಸುತ್ತ ಮುತ್ತಲಿನ    ದೇವಾಲಯ, ವೀರಗಲ್ಲು, ಮಾಸ್ತಿ ಕಲ್ಲು,  ಶಾಸನಗಳು,  ಸ್ಮಾರಕಗಳನ್ನು  ಪ್ರೀತಿಸತೊಡಗಿತು.ಆ ಮಗುವೇ  ಇಂದಿನ ಶ್ರೀಯುತರಾದ  ಲಕ್ಷ್ಮೀಶ್ ಹೆಗ್ಡೆಯವರು.      ಬಿ. ಎ . ಮುಗಿಸಿದ  ನಂತರ ಪುರಾತತ್ವ ಶಾಸ್ತ್ರ , ಇತಿಹಾಸದಲ್ಲಿ ಎಂ. ಎ . ಮಾಡಿ ನಂತರ ಎಂ. ಫಿಲ್.  ಮಾಡಿದರು, ನಂತರ ಇತಿಹಾಸಕ್ಕೆ ಶಾಸನಗಳೇ ಭದ್ರ ಬುನಾದಿ ಎಂದು ತಿಳಿದು  ಶಾಸನ ಶಾಸ್ತ್ರದಲ್ಲಿ ಡಿಪ್ಲಮೋ[ Diplama in  epigraphy] ಮಾಡಿ ಹೆಚ್ಚಿನ ಜ್ಞಾನ ಸಂಪಾದಿಸುತ್ತಾರೆ. ಇನ್ನೇನು ಇಷ್ಟೆಲ್ಲಾ ಮಾಡಿದ ಮೇಲೆ ಕೆಲ್ಸಾ ಸಿಗೋಲ್ವೆ  ಅನ್ನೋಹಾಗೆ   ಸೋಂದೆ  ಸ್ವರ್ಣವಲ್ಲಿ  ಸಂಸ್ಥಾನ ಮಠ ಕ್ಕೆ ಸೇರಿದ  ಶ್ರೀನಿಕೇತನ  ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆ  ಜೊತೆಗೆ   ಆಡಳಿತಾಧಿಕಾರಿ  ಹುದ್ದೆ  ಲಭಿಸುತ್ತದೆ. ವೃತ್ತಿ ಯಾವುದಾದ್ರೇನು ಪ್ರವೃತ್ತಿ ಗೆ ನ್ಯಾಯ ದೊರಕಬೇಕಲ್ಲ.  ಶಿರಸಿ  ಸುತ್ತಮುತ್ತಲಿನ  ಇತಿಹಾಸದ   ಸೆಳೆತ  ಇವರನ್ನು ಆವರಿಸಿದ ಕಾರಣ,  ಪ್ರವೃತ್ತಿಯನ್ನೇ  ವೃತ್ತಿ ಮಾಡಿಕೊಳ್ಳುತ್ತಾರೆ  ಶಿರಸಿಯ  ಇತಿಹಾಸಕ್ಕೆ ಏನಾದರೂ ಕೊಡುಗೆ ನೀಡುವ  ಹಾದಿಯಲ್ಲಿ ಹೆಜ್ಜೆ ಹಾಕುತ್ತಾರೆ..ಸೋಂದಾ ಅರಸರ ಕಾಲ್ಪನಿಕ  ಚಿತ್ರ. 


  2007 ರಲ್ಲಿ ಉತ್ತರ ಕನ್ನಡ  ಜಿಲ್ಲೆ ಅದರಲ್ಲೂ ವಿಶೇಷವಾಗಿ  ಶಿರಸಿಯ ಸುತ್ತ ಮುತ್ತ ಐತಿಹಾಸಿಕ  ಬನವಾಸಿ, ಸುಧಾಪುರ ಅಥವಾ ಸೋಂದೆಯ  ಅರಸು ಮನೆತನ , ಒಂದೇ ಎರಡೇ  ಬಗೆದಷ್ಟು  ಇತಿಹಾಸದ  ಅಚ್ಚರಿಗಳು, ಮಾಹಿತಿ ಸಿಗುತ್ತವೆ, ಲಕ್ಷ್ಮೀಶ್ ಹೆಗ್ಡೆ  ಅವರು ಶಿರಸಿ ಸುತ್ತ ಮುತ್ತ ಶಾಸನ, ವೀರಗಲ್ಲುಗಳ   ಅಧ್ಯಯನ,       ಐತಿಹಾಸಿಕ   ಸೋಂದೆ ಅರಸರುಗಳ  ಬಗ್ಗೆ ಅವರ  ಕೋಟೆಗಳ , ಬಗ್ಗೆ ಸಂಶೋಧನೆ , ಬನವಾಸಿಯ  ಚಾಲುಕ್ಯರ  ಬಗ್ಗೆ  ಸಂಶೋಧನೆ  ಮಾಡುತ್ತಾ ಮಾಡುತ್ತಾ   ಹಳೆ ಮೈಸೂರು ಸಂಸ್ಥಾನದಲ್ಲಿ   ಬೆಂಜಮಿನ್  ಲೆವಿಸ್  ರೈಸ್  ಅವರು ಮಾಡಿದ  ಐತಿಹಾಸಿಕ  ಸಂಶೋಧನೆಗಳಿಗೆ ಸರಿ ಸಮಾನವಾಗಿ  ಇತಿಹಾಸದ ವಿಚಾರಗಳನ್ನು ಹೆಕ್ಕಿ ತೆಗೆದು  ಜನರ ಮುಂದಿಡುತ್ತಾರೆ.  ನಂತರ ಅಮೇರಿಕಾದ ಮಿಚಿಗನ್  ವಿಶ್ವವಿದ್ಯಾಲಯದ   ಸಂಶೋಧಕರಾದ "ಎಲಿಜಬತ್ ಬ್ರಡ್ಜಸ್ "  ರವರ  ಜೊತೆಯಲ್ಲಿ  ಇಕ್ಕೇರಿ ಹಾಗು ಕೆಳದಿ   ಸಂಶೋಧನೆಯಲ್ಲಿ  ಕಾರ್ಯನಿರ್ವಹಿಸಿ, ವಿದೇಶಿಯರು  ಹೇಗೆ  ಐತಿಹಾಸಿಕ  ವಿಚಾರಗಳನ್ನು ಸಂಶೋಧನೆ ಮಾಡುತ್ತಾರೆ ಎಂಬುದನ್ನು  ತಿಳಿದುಕೊಳ್ಳುತ್ತಾರೆ. ಅನುಭವ  ಮಾಗಿದಂತೆ  ಬರೆಯುವ ಕೈಗಳು  ಬರೆಯುತೊಡಗುತ್ತವೆ.  ಈ ಬರವಣಿಗೆಯಿಂದ  ಒಂಬತ್ತು  ಐತಿಹಾಸಿಕ ಕೃತಿಗಳು, ಹತ್ತು  ಐತಿಹಾಸಿಕ  ನಾಟಕಗಳು  ಉದಯವಾಗುತ್ತವೆ. ಐತಿಹಾಸಿಕ ನಾಟಕಗಳ  ಪಾತ್ರಗಳಿಗೆ  ಜೀವಕೊಡಲು  "ರಂಗ ಚರಿತ " ಎಂಬ  ರಂಗ ಸಂಘಟನೆಯನ್ನು  ಹುಟ್ಟುಹಾಕುತ್ತಾರೆ. ಈ ಮೂಲಕ  ಸಮಾಜಕ್ಕೆ ಇತಿಹಾಸದ  ಬಗ್ಗೆ ತಿಳುವಳಿಕೆ  ನೀಡಲು  ಹಾದಿ ಕಂಡುಕೊಳ್ಳುತ್ತಾರೆ.

ಬನ್ನಿ ಇತಿಹಾಸ  ತಿಳಿಯೋಣ

ಇತಿಹಾಸದೆಡೆಗೆ  ತುಡಿಯುತ್ತಿದ್ದ  ಶ್ರೀ ಲಕ್ಷ್ಮೀಶ್ ಹೆಗ್ಡೆ  ಸುಮ್ಮನೆ ಕೂರುವ  ವ್ಯಕ್ತಿಯಲ್ಲ  ಜನರಲ್ಲಿ ಇತಿಹಾಸ ಪ್ರೀತಿ  ಬೆಳಸಲು, ರಾಜ್ಯ ಮಟ್ಟದ ಇತಿಹಾಸದ   ಜಾತ್ರೆಯನ್ನು  ಕಳೆದ ಎರಡು ವರ್ಷಗಳಿಂದ  "ಉತ್ತರ ಕನ್ನಡ  ಜಿಲ್ಲಾ ಚರಿತ್ರಾ  ಅಭಿಯಾನ" ಎಂಬ   ಹೆಸರಿನಲ್ಲಿ  ಕಾರ್ಯಕ್ರಮ  ಮಾಡುತ್ತಿದ್ದಾರೆ  , ಸುಮಾರು ಒಂದೂವರೆ ತಾಸು  ಇತಿಹಾಸದ ಹಲವು ವಿಚಾರಗಳ ಬಗ್ಗೆ  ವಿದ್ವಾಂಸರಿಂದ   ವಿಚಾರ ಮಂಡನೆ  , ಉಪನ್ಯಾಸ, ನಂತರ  ದೃಶ್ಯ ಮಾಧ್ಯಮದ ಮೂಲಕ,  ಪ್ರಹಸನಗಳ ಮೂಲಕ  , ಉತ್ತರ ಕನ್ನಡ ಜಿಲ್ಲೆಯ,   ಇತಿಹಾಸದ ವಿಚಾರಗಳನ್ನು    ಜನರಿಗೆ  ಮನಮುಟ್ಟುವಂತೆ   ತಿಳಿಸಿಕೊಡುತ್ತಿದ್ದಾರೆ.  

 
ಇತಿಹಾಸ ತಿಳಿಯಲು ಬಂದ  ಮನಸುಗಳು 


ಹರಿಯುವ ನದಿಯನ್ನು ನಿಲ್ಲಿಸಲು ಸಾಧ್ಯವೇ,   ಹರಿಯುತ್ತಲೇ ಇರುತ್ತದೆ  ಹಾಗೆಯೇ  ಇವರ ಇತಿಹಾಸದ ಅಭಿಯಾನ  ಮುಂದುವರೆದು ಕಳೆದ ನಾಲ್ಕು  ವರ್ಷಗಳಿಂದ   " ನಮ್ಮ ನೆಲದ ಕಥೆ " ಎನ್ನುವ ಅಂಕಣದ ಮೂಲಕ  ಜನರಿಗೆ ಇತಿಹಾಸದ ಕೌತುಕಮಯ ವಿಚಾರಗಳನ್ನು  ತಿಳಿಸಿಕೊಡುತ್ತಿದ್ದಾರೆ.   ಇದನ್ನು ಓದಿದ ಯಾರಾದ್ರೂ   ಅಚ್ಚರಿಯಿಂದ   "ಆಹಾ  ನಮ್ಮೂರಿನಲ್ಲಿ ಹೀಗೂ ಉಂಟಾ.....?  "   ಅನ್ನಲೇಬೇಕು ಹಾಗಿರುತ್ತವೆ    ಮಾಹಿತಿ.  ಯಾರಿಗೆ ತಾನೇ  ತಮ್ಮ ಊರಿನ ಇತಿಹಾಸದ ಬಗ್ಗೆ ಹೆಮ್ಮೆ ಇರೋಲ್ಲಾ   ಹೇಳಿ,  ಹಾಗಾಗೇ   ಶ್ರೀ ಲಕ್ಷ್ಮೀಶ್ ಹೆಗ್ಡೆ ಅವರು  ತಮ್ಮ ಸುತ್ತಮುತ್ತಲಿನ ಸ್ಥಳೀಯ ಇತಿಹಾಸ   ಕುರಿತು ಗಂಭೀರ  ಚಿಂತನೆ ನಡೆಯುವಂತಾಗಲು    ರಾಜ್ಯ ಮಟ್ಟದ  ಇತಿಹಾಸ ಸಮ್ಮೇಳನ   ಆಯೋಜನೆಗೆ ಮುಂದಾಗುತ್ತಾರೆ.  ಜೊತೆಗೆ   ಇತಿಹಾಸದ  ಪಯಣದಲ್ಲಿ ಕಾಣಸಿಗುವ ಸಾಧಕರನ್ನು ಗೌರವಿಸಲು ಸೋದೆ ಸದಾಶಿವರಾಯ  ಪ್ರಶಸ್ತಿಯನ್ನು   ಪ್ರತಿಷ್ಠಾಪಿಸುತ್ತಾರೆ  . ಕಳೆದ ಎರಡು ವರ್ಷಗಳಿಂದ   ಅದ್ಭುತವಾದ  ಯಶಸ್ಸನ್ನು   ಈ  ಇತಿಹಾಸ ಸಮ್ಮೇಳನ  ಗಳಿಸಿ ಶಿರಸಿ  ಊರಿನ   ಗೌರವಕ್ಕೆ  ಇತಿಹಾಸದ  ಹೆಮ್ಮೆಯ ಕಿರೀಟ  ತೊಡಿಸಿದೆ.  ನಾಡಿನ ಹಲವಾರು  ಪ್ರಖ್ಯಾತ  ಇತಿಹಾಸಕಾರರು   ಇದರಲ್ಲಿ ಭಾಗವಹಿಸಿ   ಶಿರಸಿಯ  ಇತಿಹಾಸದ  ಗೌರವವನ್ನು ಹೆಚ್ಚಿಸಿದ್ದಾರೆ.
ಅರೆ ಇತಿಹಾಸದ  ಸಮ್ಮೇಳನಕ್ಕೆ  ಇಷ್ಟು ಜನ ಬರ್ತಾರಾ...?


ಇತಿಹಾಸದ ಹುಚ್ಚನ್ನು ಹತ್ತಿಸಿಕೊಂಡವರು ಸುಮ್ಮನಿರಲು ಸಾಧ್ಯವೇ ...? ಮುಂದಿನ ಪೀಳಿಗೆಯವರು  ಇತಿಹಾಸದ ತೇರನ್ನು ಎಳೆಯ ಬೇಕಲ್ಲವೇ ...? ಅದಕ್ಕಾಗಿ  ತಮ್ಮ ಸಂಸ್ಥೆ   ಶ್ರೀ ನಿಕೇತನದ   ಮಕ್ಕಳಿಗೆ   ಇತಿಹಾಸದ ರುಚಿ ಹತ್ತಿಸಲು  ಶ್ರಮಿಸುತ್ತಿದ್ದಾರೆ, ಹಾಗಾಗಿ ಮಕ್ಕಳಿಂದಲೇ  ಇತಿಹಾಸದ ವಿಚಾರಗಳನ್ನು  ಅಧ್ಯಯನ  ಹಾಗು ಸಂಶೋಧನೆ ಮಾಡಿಸಿ  ನಾಡಿನ  ಐತಿಹಾಸಿಕ  ಸ್ಥಳ ಬನವಾಸಿಯ ಬಗ್ಗೆ  ಮಕ್ಕಳಿಂದಲೇ ಗ್ರಂಥ ರಚನೆ  ಮಾಡಿಸಿದ್ದು   ನಿಜಕ್ಕೂ ಹೆಮ್ಮೆ ಪಡುವ   ವಿಚಾರ.  ೨೦೧೩ ರಲ್ಲಿ  ಆ ಇತಿಹಾಸ ಕಾರರ  ಬಗ್ಗೆ ವಿಚಾರ ತಿಳಿದು ಇವರ ಸಂಶೋಧನಾ ಸಾಹಿತ್ಯಕ್ಕಾಗಿ   ಡಾಕ್ಟರ್ ಎಂ.ಎಂ. ಕಲಬುರ್ಗಿಯವರಿಂದ  " ಬಸವರಾಜ ಕಟ್ಟೇಮನಿ  ರಾಜ್ಯ ಪ್ರಶಸ್ತಿ"  ನೀಡಿ  ಗೌರವಿಸಲಾಗಿದೆ.


ಬನವಾಸಿಯ ಮೂಲ ಮಧುಕೇಶ್ವರ ದೇವಾಲಯ. 


ಇತಿಹಾಸವನ್ನೇ  ಉಸಿರಾಡುತ್ತಿರುವ  ಶ್ರೀ ಲಕ್ಷ್ಮೀಶ್ ಹೆಗ್ಡೆ ಅವರ ಸಾಧನೆಯನ್ನು ಯಾರೂ ಗುರುತಿಸಲಿಲ್ವೇ  ಅಂತಾ  ಅಂದುಕೊಂಡಿರಾ ...?  ನಿಜ   ಇಂತಹ ಸಾಧನೆಗಳನ್ನು  ಗುರುತಿಸುವವರು ಬಹಳ ಕಡಿಮೆ, ಜೊತೆಗೆ  ಇಂತಹ  ಅದ್ಭುತ  ವ್ಯಕ್ತಿಗಳು  ಪ್ರಚಾರ ಪ್ರಿಯರಲ್ಲಾ, ಸದ್ದಿಲ್ಲದೇ  ತಮ್ಮ ಪಾಡಿಗೆ   ತಾವು  ತಮ್ಮ ಕರ್ತವ್ಯ ಮಾಡುತ್ತಿರುತ್ತಾರೆ.  "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ  " ಎನ್ನುವ ಕವಿತೆಗೆ   ಅನ್ವರ್ಥವಾಗಿ  ಬದುಕುವ  ಈ ಇತಿಹಾಸಕಾರನನ್ನು  ಕನ್ನಡ ನಾಡಿಗೆ ಕೊಡುಗೆ ನೀಡಿದ "ಶಿರಸಿ"  ಗೆ  ಅಲ್ಲಿನ ಇತಿಹಾಸಕ್ಕೆ  ಒಮ್ಮೆ ಜೈ ಅಂದುಬಿಡೋಣ.