Friday, January 22, 2010

ಬಿಳಿಗಿರಿಯ ಬನದಲ್ಲಿ ..೦೮ ಬನ್ನಿ ಬನದ ರಕ್ಷಕರ ನೆನೆಯೋಣ!! [ಯಾತ್ರೆಯ ಅಂತಿಮ ಘಟ್ಟ]


ನಾವು ನಮ್ಮ ಬನದ ಯಾತ್ರೆಯ ಅಂತಿಮ ಚರಣ ಮುಟ್ಟುವ ಸಮಯ ಬಂದಿತ್ತು.ಮನದ ತುಂಬಾ ಏನೋ ಬೇಸರದ ಭಾವ ತುಂಬಿತ್ತು.ಇಂತಹ ಪರಿಸರದಿಂದ ನಮ್ಮ ನರಕ ಸದೃಶ ನಗರಗಳಿಗೆ ಹಿಂದಿರುಗಬೇಕಲ್ಲ ಅಂತ  ಎಲ್ಲರ ಮನದಲ್ಲೂ ಯೋಚನೆ ಬಂದು ಎಲ್ಲರ  ಮುಖಗಳು ಬಾಡಿದ್ದವು.ನಮ್ಮೊಡನಿದ್ದು ನಮ್ಮನ್ನು ಪ್ರೀತಿಯಿಂದ ನೋಡಿಕೊಂಡ ಅರಣ್ಯ ಇಲಾಖಾ ಸಿಬ್ಬಂದಿಗೆ ಹೇಗೆ  ಧನ್ಯವಾದ ಅರ್ಪಿಸಬೇಕೆಂಬ ಅರಿವಿಲ್ಲದೆ ತೊಳಲಾಡಿದೆವು.ನಾವೇ ಇವರ ಚಟುವಟಿಕೆ ಬಂದದಿನದಿಂದ ನೋಡಿದ್ದೆವು.ಏನೇ ಆಗ್ಲಿ ಇವರ ಶ್ರಮದ ಸೇವೆ ನಮ್ಮ ನಾಡಿನ ಕಾಡುಗಳನ್ನು ಉಳಿಸಲು ಸಹಕಾರಿಯಾಗಿದೆ .ಹೆಂಡತಿ, ಮಕ್ಕಳು, ಬಂಧುಗಳು ಎಲ್ಲರನ್ನು ಮರೆತು ದಟ್ಟ ಕಾಡಿನಲ್ಲಿ ಅಡಿಗಡಿಗೂ ಸಮಸ್ಯೆಗಳನ್ನು ಎದುರಿಸುತ್ತ ಸರ್ಕಾರಿ ಕೆಲಸ ನಿರ್ವಹಿಸುವ ಈ ಫಾರೆಸ್ಟ್ ವಾಚರ್ಸ್ ,ಗಾರ್ಡ್ ಇವರುಗಳ ಕಷ್ಟ ನೋಡಿದವರಿಗೆ ಮಾತ್ರ ಗೊತ್ತಾಗುತ್ತೆ! ದಟ್ಟ ಕಾಡಿನ  anti poaching ಕ್ಯಾಂಪ್ ಗಳಲ್ಲಿ ಹಗಲೂ ರಾತ್ರಿ ಎನ್ನದೆ ಉಳಿದುಕೊಂಡು ಕಾಡಿನಲ್ಲಿ ಸುತ್ತಾಡಿ ಕಾಡ್ಗಿಚ್ಚು ಬಗ್ಗೆ, ಕಾಡು ಗಳ್ಳರ  ಬಗ್ಗೆ ನಿಗಾ ಇಟ್ಟು ಮೇಲಧಿಕಾರಿಗಳಿಗೆ ಮಾಹಿತಿ ನೀಡುವುದು ,ಯಾವುದಾದರೂ ವನ್ಯ ಜೀವಿ ಸಾವನ್ನಪ್ಪಿದರೆ ಮಾಹಿತಿ ನೀಡುವುದು, ಕಾಡಿನ ಸಂಪತ್ತು ನಾಡಿಗೆ ಕಳ್ಳಸಾಗಣೆ ಮಾಡುವವರ ವಿರುದ್ದ ಕಾದಾಡುವುದು ಇವರ ಕೆಲಸ.ಎಷ್ಟೋ ಬಾರಿ ಇವ್ರೂ ಕಾಡಿನಲ್ಲಿ ಬೆಳಕಿಲ್ಲದೆ ರಾತ್ರಿವೇಳೆ ಮೈಲುಗಟ್ಟಲೆ ನಡೆಯುತ್ತಾರೆ.[ರಾತ್ರಿವೇಳೆ ಕಾಡುಗಳ್ಳರು ಬೆಳಕು ಕಂಡರೆ ಇವರತ್ತ ಗುಂಡು ಹಾರಿಸುವ ಸಂದರ್ಭ ವಿರುವ ಕಾರಣ ಕತ್ತಲಲ್ಲಿ ಬೆಳಕನ್ನು ಹಾಯಿಸದೆ ನಡೆಯುತ್ತಾರೆ.]ನೀಡಿರುವ  ವೈರ್ ಲೆಸ್  ನಿಂದ ಮಾಹಿತಿ ನೀಡಲು ತರಂಗ ಸಿಗದಿದ್ದರೆ  ರಾತ್ರಿ ವೇಳೆಯಲ್ಲೇ  ಎತ್ತರದ ಮರ ಏರಿ ಮೇಲಧಿಕಾರಿಗಳಿಗೆ ಆ ವೇಳೆಯಲ್ಲಿನ ಮಾಹಿತಿ ನೀಡುತ್ತಾರೆ!ಕಾಡಿನ ನೀರವತೆಯಲ್ಲಿ  ನೋವನ್ನು ಮರೆತು ಕರ್ತವ್ಯ ನಿರ್ವಹಿಸುವ ಇವರ ಸೇವೆ ಶ್ಲಾಘನೀಯ .ನಮ್ಮ ನಾಡಿನ ಕಾಡನ್ನು ರಕ್ಷಿಸಲು ಹೆಜ್ಜೆ ಹೆಜ್ಜೆಗೂ ಸಾಹಸದ ಕ್ಷಣಗಳನ್ನು ಎದುರಿಸಿ ಸರ್ಕಾರಿಸೇವೆ ಮಾಡುತ್ತಿರುವ ಇವರು ನಮ್ಮ ನಾಗರೀಕ?? ಸಮಾಜದಲ್ಲಿ ಎಲೆ ಮರೆಯ ಕಾಯಿಗಳಿದ್ದಂತೆ. ನಮ್ಮ ಅಮೂಲ್ಯ ಅರಣ್ಯ ಸಂಪತ್ತನ್ನು ರಕ್ಷಿಸುವ ಇವರಿಗೆ  ನಮ್ಮ  ಮನಃಪೂರ್ವಕ  ಅಬಿನಂದನೆ ತಿಳಿಸಿ  ನಾಡಿನತ್ತ ತೆರಳಿದೆವು! ಬಿಳಿಗಿರಿಯ ಬನದ ಯಾತ್ರೆಯಲ್ಲಿ ನಮ್ಮ ನೆನಪಿನ ಬುತ್ತಿಯಿಂದ ೦೮ ಕಂತುಗಳಲ್ಲಿ ಅನುಭವ ಹಂಚಿಕೊಂಡಿದ್ದೇನೆ  ನಿಮಗೆ ಇಷ್ಟವಾಗಿದ್ದರೆ  ನನಗೆ ಸಂತೋಷ,ಖುಷಿಯಾಗಿದ್ದರೆ ನಿಮ್ಮಿಂದ ಒಂದು ಮಾತು ಬರಲಿ ಅಲ್ವ? ಬಿಳಿಗಿರಿ ಬನದ ಯಾತ್ರೆಯ ಶುಭ ವಿದಾಯ.ವಂದನೆಗಳು

No comments: