Thursday, April 9, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......11ಪ್ರೀತಿಯ ಸಹೋದರಿ ಸಂಧ್ಯಾ ಮನೆಯ ಅಂಗಳದಲ್ಲಿ

ಸಂಧ್ಯೆಯ  ಮನೆಯ ಅಂಗಳದಿ ಮೂಡಿತ್ತು ಚಿತ್ತಾರ
 
ಎಲ್ಲರಿಗೂ ನಮಸ್ಕಾರ  ಬಹಳ ತಿಂಗಳ ನಂತರ  ಮತ್ತೊಮ್ಮೆ ನನ್ನ ಬ್ಲಾಗ್ ಪಯಣ ಶುರುವಾಗಿದೆ.  ನಿಜ ಕಳೆದ  ೨೦೧೪ ರ ನವೆಂಬರ್  ೮ ರಲ್ಲಿ ಹಾಕಿದ  ಪೋಸ್ಟ್ ನಂತರ  ಬ್ಲಾಗ್ ಬರವಣಿಗೆ  ಸಂಪೂರ್ಣ ನಿಂತೇ  ಹೋಗಿತ್ತು .  ನನ್ನ ಅನಾರೋಗ್ಯ , ಸೋಮಾರಿತನ , ಕೆಲಸದ ಒತ್ತಡ,   ಮುಂತಾದ ಸಮಜಾಯಿಷಿ  ಕೊಟ್ಟರೂ ನನ್ನ ಮನಸು ಹೇಳಿದ್ದು ನೀನು ಸೋಮಾರಿ ಕಣೋ ಅಂತಾ . ....! ಹಾಗಾಗಿ  ಬ್ಲಾಗ್ ಅಂಕಣದ ಕ್ಷಮೆ ಕೋರಿ  ಮತ್ತೊಮ್ಮೆ ನಿಮ್ಮ  ನಡುವೆ ಬಂದು ನಿಂತಿದ್ದೇನೆ .


ಪರಿಶುದ್ದ  ಪರಿಸರದಲ್ಲಿ  ಮೂಡಿಬಂದ  ಪರಿಶುದ್ದ ಮನಸಿನ ತಂಗ್ಯವ್ವ

ಈ ಬ್ಲಾಗ್ ಪ್ರಪಂಚವೇ ಒಂತರಾ  ವಿಚಿತ್ರಾ ಕಣ್ರೀ , ನಮ್ಮ ಜೊತೆ ಹುಟ್ಟದಿದ್ದರೂ ನಮ್ಮ  ಜೊತೆ ಹುಟ್ಟಿದ  ಸಹೋದರ ಸಹೋದರಿಯರಂತೆ  ಆತ್ಮೀಯರಾಗುತ್ತಾರೆ ಕೆಲವರು , ಮತ್ತೆ ಕೆಲವರು  ತಮ್ಮ ಪ್ರತಿಭೆತೋರಿ  ಒಳ್ಳೆಯ ನಡವಳಿಕೆಯಿಂದ  ನಮ್ಮ ಕುಟುಂಬದ ಸದಸ್ಯರೇ ಆಗಿಬಿಡುತ್ತಾರೆ , ಹೀಗಾಗಿ  ಇಂದು ಬ್ಲಾಗ್ ಪ್ರಪಂಚದಲ್ಲಿ  ನನಗೆ ಅಣ್ಣಾ, ತಮ್ಮಾ, ಅಕ್ಕಾ, ತಂಗಿ, ಗುರುಗಳು  ಎಲ್ಲರೂ  ಸಿಕ್ಕಿ  ಜೀವನದ ಕೊರತೆ ನೀಗಿಸಿದ್ದಾರೆ . ಅರೆ ಇದೇನು ಹೊಸ ಪುರಾಣ ತೆಗೆದಾ ಅಂತೀರಾ ...? ಬನ್ನಿ  ನಮ್ಮ ತುಂಟ ಮನಸಿನ ಪಯಣದಲ್ಲಿ  ಬ್ಲಾಗ್ ಪ್ರಪಂಚದಲ್ಲಿ ಪರಿಚಿತಳಾಗಿ , ನಮ್ಮ ಮನೆಯ ಮುದ್ದಿನ ತಂಗಿ  ಆದ ಒಂದು ಹುಡುಗಿ ಕಥೆ ಹೇಳ್ತೇನೆ .

ಈ ಹುಡುಗಿ ನನಗೆ ಹಲವಾರು ಬ್ಲಾಗ್ ಮಿತ್ರರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಕ್ಕಿದರೂ  ನಮ್ಮಿಬ್ಬರ ಮಾತು ಕಥೆ ಅಷ್ಟಕಷ್ಟೇ , ಒಂದು ದಿನ ನಮ್ಮ ಶ್ರೀಕಾಂತ್ ಮಂಜುನಾಥ್  ಜೊತೆ ಮಾತನಾಡುತ್ತಾ  ಮೈಸೂರಿನ ಕಡೆ ಒಮ್ಮೆ ಬನ್ನಿ ಎಂದಿದ್ದೆ, ಹಾಗೆ ಒಂದು ಕಾರ್ಯಕ್ರಮ ತಯಾರಾಯ್ತು , ಅದರಂತೆ ನಮ್ಮ ಮನೆಗೆ ಶ್ರೀಕಾಂತ್ ಕುಟುಂಬ , ಸುಷ್ಮಾ ಮೂಡಬಿದ್ರಿ ,  ಸುಲತ ಶೆಟ್ಟಿ  ಹಾಗು ಸಂಧ್ಯಾಭಟ್  ಬಂದರು , ನಂತರ ಮನೆಯವರ ಪರಿಚಯ, ಮಾತುಕತೆ , ಸುತ್ತಾಟ  ಇವುಗಳಿಂದ  ಎಲ್ಲರೂ ನಮ್ಮ ಮನೆಯ  ಸದಸ್ಯರೇ ಆಗಿ ಹೋದರು , ನಂತರ ನಮ್ಮಗಳ ಸಂಬಂಧ  ಬಹಳಷ್ಟು ಗಟ್ಟಿಯಾಗಿ ಒಂದು ಒಳ್ಳೆಯ ಸದಸ್ಯರ ಕುಟುಂಬವೇ ನಿರ್ಮಾಣ ಆಯ್ತು . ಹೀಗೆ ಪರಿಚಯವಾದ  ನಮ್ಮ ಸಂಧ್ಯಾಭಟ್  ನನ್ನ ತಾಯಿಗೆ ಮಗಳೇ ಆಗಿ ಹೋದಳು . ಹಾಗಾಗಿ  ನನಗೆ ಒಬ್ಬ ಪುಟ್ಟ ತಂಗಿ ದೊರೆತಳು .

ಶಿರಸಿಯ ಸಹವಾಸ ಶುರು ಆಗಿದ್ದು "ಸಾಗರದಾಚೆಯ ಇಂಚರ"  ಬ್ಲಾಗ್ ಮಿತ್ರ   ಶ್ರೀ ಗುರುಮೂರ್ತಿ ಹೆಗ್ಡೆ  ಅವರಿಂದ , ಅವರ ಸಹೋದರನ ವಿವಾಹಕ್ಕೆ  ಆಮಂತ್ರಣ  ನೀಡಿದ  ಕಾರಣ "ಕೊಳಗಿ ಬೀಸ್ " ಎಂಬಲ್ಲಿಗೆ ಹೋಗಿದ್ದೆ, ಮದುವೆಯ  ಸಮಯದಲ್ಲಿ  ಕೆಲವು ಚಿತ್ರಗಳನ್ನು ತೆಗೆದು  ನನ್ನ ಬ್ಲಾಗ್ ನಲ್ಲಿ ಹಾಕಿದ್ದೆ,   ಆಗ ಈ ಹುಡುಗಿ ಹೇಳಿದ್ದು ಅಣ್ಣಾ  ನಮ್ಮ ಅಪ್ಪನ ಚಿತ್ರ ಬ್ಲಾಗ್ ನಲ್ಲಿ ಹಾಕಿದ್ದೀರಿ  ಖುಷಿಯಾಯ್ತು  ಅಂತಾ , ನನಗೆ ಅಚ್ಚರಿ  ಈ ಸಹೋದರಿಯ ಸಂಬಂಧ  ಮತ್ತಷ್ಟು  ಗಟ್ಟಿಯಾಗಲು ಇಂತಹ ಘಟನೆಗಳು  ನೆರವಾದವು . ಇಂತಹ ಹುಡುಗಿ ಮದುವೆಯ ನಿಶ್ಚಿತಾರ್ಥಕ್ಕೆ  ಪ್ರಕಾಶ್ ಹೆಗ್ಡೆ ಹಾಗು ನನ್ನನ್ನು ಪ್ರೀತಿಯಿಂದ ಕರೆದಿದ್ದಳು  ಇವಳ ಈ ನಿಶ್ಚಿತಾರ್ಥದ  ನೆಪವೇ ಈ ಪಯಣದ  ಅಡಿಗಲ್ಲಾಯ್ತು .

  ಬ್ಲಾಗ್ ಲೋಕ ಕೊಟ್ಟ  ತಂಗಿ


ಪ್ರಕಾಶಣ್ಣನ ಮನೆಯಲ್ಲಿ  ನಾಗೇಶ್ ಅಣ್ಣನ   ಅದ್ಭುತ  ಗನ್  ಕಾರ್ಯಕ್ರಮ ಮುಗಿಸಿ  ಸಂಧ್ಯ ಭಟ್ ಮನೆಗೆ ದೌಡಾಯಿಸಿದೆವು . ನನಗೋ ಮುಜುಗರ , ಪ್ರಕಾಶಣ್ಣ ಹಾಗು ಸಂಧ್ಯಾ ಭಟ್ ಹೊರತಾಗಿ ಅಲ್ಲಿ ಯಾರೂ ಪರಿಚಯವಿಲ್ಲಾ  ಹೇಗಪ್ಪಾ  ಅಂತಾ ಅಂದುಕೊಂಡೆ , ಅಲ್ಲಿಗೆ ತಲುಪಿದ ನಂತರ  ಅಲ್ಲಿ ಸಿಕ್ಕ ಆತ್ಮೀಯ ವಾತಾವರಣ ನನ್ನ ಮನಸಿನ ಆತಂಕ  ದೂರ ಮಾಡಿತು . ನಾನು ಹಾಗು ಪ್ರಕಾಶಣ್ಣ   ಹಾಗೆ ಮನೆಯೊಳಗೇ  ಕಾಲಿಟ್ಟೆವು,  ಪ್ರೀತಿಯ ಸ್ವಾಗತ ದೊರಕಿತು,  ಅಲ್ಲಿ ನೆರದಿದ್ದ  ಎಲ್ಲರ ಪರಸ್ಪರ ಪರಿಚಯ  ಆಯಿತು, ಈ ಪುಟ್ಟ ತಂಗಿಗೆ  ವಿವಾಹ  ಮಾಡಿಕೊಡುವ ಮೊದಲ ಹಂತದ  ನಿಶ್ಚಿತಾರ್ಥ ಕಾರ್ಯ ಅಂದು ಜರುಗಿತ್ತು, ಎಲ್ಲೆಡೆ ಸಂಭ್ರಮದ  ವಾತಾವರಣ,



ಯಾವುದೇ ಕಾರ್ಯ ಇದ್ದರೂ  ಅಡಿಕೆ ಬೆಳೆ  ಕೆಲಸ ನಿಲ್ಲದು 
ನಾನೂ  ಸಹ  ಭಾಗವಹಿಸಿದೆ ಗೊತ್ತಾ

ಮನೆಯ ಸುತ್ತಾ  ನನ್ನ ಕ್ಯಾಮರ ದೊಡನೆ ಒಂದು ಸುತ್ತು ಹಾಕುತ್ತಾ ಬಂದೆ  ಮನೆಯ ಸುತ್ತಾ  ಅಡಿಕೆ ತೋಟ , ಕೊಟ್ಟಿಗೆಯಲ್ಲಿ  ಆಕಳುಗಳ  ದರ್ಶನ,  ಮುದ್ದಿನ ನಾಯಿ ಮನೆಯಲ್ಲಿನ ಸಂಭ್ರಮಕ್ಕೆ  ತಾನೂ ಭಾಗಿಯಾಗಿತ್ತು,  ಅಡಿಕೆ ಸುಲಿಯುವ ಕಾರ್ಯ  ತನ್ನ ಪಾಡಿಗೆ ತಾನು ನಡೆದಿತ್ತು,  ಎರಡು ಕುಟುಂಬಗಳ  ನಡುವೆ  ಹೊಸ ಬಾಂಧವ್ಯ  ಸೃಷ್ಟಿಯಾಗುವ  ವೇಧಿಕೆ  ಸಿದ್ದವಾಗುತ್ತಿತ್ತು,  ಹಿರಿಯರು ತಮ್ಮ ಮನೆತನದ  ಸಂಪ್ರದಾಯದ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು  ಒಟ್ಟಿನಲ್ಲಿ ಹೊಸ ಲೋಕದ ಹೊಸ ಹುರುಪಿನ  ಸನ್ನಿವೇಶ ಅಲ್ಲಿ ಮನೆ ಮಾಡಿತ್ತು,   ಹೆಣ್ಣಿನ ಮನೆಯವರಿಗೆ  ತಮ್ಮ ಮಗಳು ನೆಲೆಸಲು  ತನ್ನದೇ ಸಂಸಾರ  ರೂಪಿಸಿಕೊಳ್ಳಲು  ಒಬ್ಬ ಒಳ್ಳೆಯ ವರ  ಸಿಕ್ಕಿದ ಹಾಗು ತಮ್ಮ ಮಗಳು  ಅವನ ಜೊತೆ  ಸಂತಸದ ಬಾಳು ಬಾಳುತ್ತಾಳೆ    ಎಂಬ ಖುಷಿ ,  ಹಾಗು  ಗಂಡಿನ ಮನೆಯವರಿಗೆ  ತಮ್ಮ ವಂಶದ  ಕುಡಿ  ಬೆಳಗಲು  ಬೆಳೆಯಲು , ತಮ್ಮ ಮನೆತನದ ಹಿರಿಮೆ ಹೆಚ್ಚಿಸಲು ಒಬ್ಬ ಒಳ್ಳೆಯ  ವಧು ಸಿಕ್ಕದಳು   ಎಂಬ ಖುಷಿ , ಈ ಖುಷಿಯ ಪರಸ್ಪರ  ಹಂಚಿಕೊಳ್ಳುವ  ಸಲುವಾಗಿ   ಎರಡೂ ಕುಟುಂಬಗಳ  ಬೆಸುಗೆ ಹಾಕಲು  ವಿವಾಹ ಮಹೋತ್ಸವ  ಕಾರ್ಯ ಹಮ್ಮಿಕೊಳ್ಳಲು  ತಕ್ಕ  ದಿನ ನಿಗದಿ ಪಡಿಸುವ ಕಾರ್ಯ  ಈ ನಿಶ್ಚಿತಾರ್ಥ .



ಹಿರಿಯರ  ಉಪಸ್ತಿತಿ

ಹವ್ಯಕರ ಮನೆಯ ದೇವರ ಮನೆಯ ನೋಟ

ದೇವರ  ಸಾಕ್ಷಿಯಾಗಿ  ಈ ಮದುವೆಗೆ  ಒಪ್ಪಿಕೊಂಡ  ಎರಡು ಕುಟುಂಬಗಳು
ಸಮಯ ಕಳೆದಂತೆ  ಜನ ಸೇರುತ್ತಿದ್ದರು ಹಿರಿಯರು, ಬಂದು ಬಳಗ  ಸೇರಿಕೊಂಡರು ಕಾರ್ಯಕ್ರಮ ಶುರು ಆಯ್ತು , ಮೊದಲ ಕಾರ್ಯ ಎಲ್ಲರೂ ದೇವರ ಮನೆಯಲ್ಲಿ ಒಟ್ಟಿಗೆ ಕುಳಿತು ನಿಶ್ಚಿತಾರ್ಥದ  ವಿವಿಧ  ಶಾಸ್ತ್ರ ಸಂಪ್ರದಾಯಗಳನ್ನು  ನಡೆಸುತ್ತಿದ್ದರು, ತಮ್ಮ ಮುಂದಿನ ಜೀವನದ  ಮೊದಲ ಕಾರ್ಯದಲ್ಲಿ  ವಧು ಹಾಗು ವರ  ಮನಸಿನಲ್ಲಿ  ಮಂಡಿಗೆ  ತಿನ್ನುತ್ತಾ  ಏನೂ ಅರಿಯದಂತೆ  ಗಂಭೀರವಾಗಿ  ಕುಳಿತ್ತಿದ್ದರು . ಈ ನಡುವೆ ಎರಡೂ ಕುಟುಂಬಗಳ  ಹಿರಿಯರು  ಹರುಷದಿಂದ  ವಿವಿಧ ಶಾಸ್ತ್ರ ಮಾಡುತ್ತಾ  ವಿವಾಹ ನಿಶ್ಚಿತಾರ್ಥ ಕಾರ್ಯವನ್ನು  ನೆರವೇರಿಸಿದರು .


ಬನ್ನಿ ಬನ್ನಿ ಊಟ ಸಿದ್ಧವಿದೆ ಎಂದಿತ್ತು ಅಡುಗೆಮನೆ

ಎಲ್ಲಾ ಮುಗಿದ ನಂತರ  ಮುಂದಿನ ನಡೆ  ಊಟದ ಮನೆಗೆ ,  ಊಟದ  ಕೋಣೆ ತಲುಪಿದ ನನಗೆ  ಅಲ್ಲಿನ ಶಿಸ್ತು ಬದ್ದ  ವ್ಯವಸ್ತೆ ಖುಷಿಕೊಟ್ಟಿತು,  ಇವರೆಲ್ಲಾ ಇಲ್ಲೇ ಕಾರ್ಯ ಮಾಡುತ್ತಿದ್ದರು ಅಡುಗೆ ಮಾಡಿದ್ದು ಯಾರು ..? ಎಂಬ ಪ್ರಶ್ನೆ ಮೂಡಿತ್ತು,  ಮನೆಯಲ್ಲಿನ ಹೆಂಗಸರೇ  ಅದ್ಯಾವ ಮಾಯದಲ್ಲೋ  ರುಚಿಯಾದ  ರುಚಿಯಾದ ಅಡುಗೆ ಮಾಡಿ  ಸಂಧ್ಯಾ ಭಟ್ ನಿಶ್ಚಿತಾರ್ಥದ  ಕಾರ್ಯಕ್ರಮದ  ಸೊಬಗನ್ನು ಮತ್ತಷ್ಟು  ಹೆಚ್ಚಿಸಿದ್ದರು , ನಾನಂತೂ   'ಅಪ್ಪೆ ಹುಳಿ' ಪ್ರಿಯ ಆದ ಕಾರಣ   ಚೆನ್ನಾಗಿ ಬ್ಯಾಟಿಂಗ್  ಮಾಡಿದೆ   ಹವ್ಯಕರ   ಪುಷ್ಕಳ ಭೋಜನ  ಮುಗಿಸಿದ ನಾವು,  ಮುಂದಿನ ಪಯಣಕ್ಕೆ ಅಲ್ಲಿದವರ ಅನುಮತಿ ಪಡೆಯಲು  ಮುಂದಾದೆವು, ಒಂದು ಸುಂದರ  ಸಂಪ್ರದಾಯದ  ಅನಾವರಣ ಆಗಿತ್ತು ಅಂದು .


ಬಲು ಅಪರೂಪ ನಮ್ ಜೋಡಿ   ವಿವಾಹ ಆಗಲು ನಾವ್ ರೆಡಿ


ಊಟ ಮುಗಿಸಿ ಮನೆಯ ಹಿಂಬದಿಗೆ  ಬಂದ  ನಮಗೆ ನೂತನ ವಧು ವರರ  ದರ್ಶನ  ಆಯ್ತು , ನಮ್ಮ ಕ್ಯಾಮರಾಗಳು ಸುಮ್ಮನಿರಲು ಸಾಧ್ಯವೇ ಕ್ಲಿಕ್ಕಿಸೆಬಿಟ್ಟವು  ಕೆಲವು ಸುಂದರ ಕ್ಷಣಗಳನ್ನು , ಇಬ್ಬರ ಮುಖದಲ್ಲೂ ಮಂದ ಹಾಸ,  ಹೊಸ ಬಾಳಿನ ಪಯಣಕ್ಕೆ  ಅನುವಾಗಲು  ಇಬ್ಬರಲ್ಲೋ  ಹೊಸ ಹರುಷದ ತುಡಿತ ಕಾಣುತ್ತಿತ್ತು,  ವಿವಾಹ ಆಗುವವರೆಗೆ ಇಬ್ಬರ ನಡುವೆ  ಸಾಕಷ್ಟು  ವಿಚಾರ ವಿನಿಮಯ ಆಗೋದು ಬಾಕಿ ಇತ್ತು,  ಇದ್ದಕ್ಕೆ ನಾವು ಸಿದ್ದ  ಅನ್ನೋ ಹಾಗೆ ಇಬ್ಬರ ಮುಖದ ನಗು ಮಿನುಗುತ್ತಿತ್ತು.






ಈ ಘಟನೆಗೆ ನಾವೂ ಸಾಕ್ಷಿಗಳು


ಅತ್ತಾ ಹೊಸ  ಹರುಷದ ಹೊನಲು ಹರಿಯುತ್ತಿದ್ದರೆ ಇತ್ತ ವಧುವಿಗೆ  ತನ್ನ ತವರು ಮನೆಯ  ಸಂಬಂಧ  ಎಲ್ಲಿ  ಜಾರುವುದೋ ಎಂಬ ಹೆದರಿಕೆ,  ಜೊತೆಯಲ್ಲಿ ಬೆಳೆದ  ಅಕ್ಕಾ ,ತಮ್ಮನ ಪ್ರೀತಿಯ ನೆನಪಿನ ಬಂಧನ ಎಲ್ಲಿ  ಕಳಚಿತೋ ಎಂಬ  ಆತಂಕ   ಹಾಗಾಗಿ ಸನಿಹದಲ್ಲಿ ಇದ್ದ ತಮ್ಮನನ್ನು   ತಬ್ಬಿ ಪ್ರೀತಿಯ  ನೆನಪ  ಹಸಿರಾಗಿಡಲು  ಪ್ರಯತ್ನ ನಡೆಸಿದಳು ನಮ್ಮ ಸಂಧ್ಯಾ ಪುಟ್ಟಿ .  ತಮ್ಮ ಪದ್ಮನಾಭ ಸಹ  ಪ್ರೀತಿಯ ಅಕ್ಕನ ಜೊತೆ ಕಳೆದ ದಿನಗಳ ನೆನೆಯುತ್ತಾ  ಅಕ್ಕನ ಪ್ರೀತಿಯ ಮಡಿಲಿಗೆ ಜಾರಿದ್ದ.  ಈ ಎಲ್ಲಾ ನೋಟವನ್ನು ದೂರದಲ್ಲಿ ಕುಳಿತು ನೋಡುತ್ತಿದ್ದ  ಹಲವು ಹಿರಿಯ  ಮನಸುಗಳು ಶುಭ ಹಾರೈಸಿದ್ದವು.  ಅಲ್ಲಿಗೆ  ಪ್ರೀತಿಯ ಪುಟ್ಟ ತಂಗಿ  ಸಂಧ್ಯಾ ಭಟ್  ವಿವಾಹ  ನಿಶ್ಚಿತಾರ್ಥ  ಕಾರ್ಯಕ್ರಮ  ಯಶಸ್ವಿಯಾಗಿ ಮುಗಿಯಿತು.   ಪ್ರಕಾಶಣ್ಣ ಹಾಗು ನಾನು   ಈ ಪ್ರೀತಿಯ  ಸಮಾರಂಭದಲ್ಲಿ    ನೂತನ  ವಧು ವರರರಿಗೆ ಶುಭ ಹಾರೈಸಿ  ಅಲ್ಲಿದ್ದ ಎಲ್ಲರ  ಪ್ರೀತಿಯ ಶುಭ ಹಾರೈಕೆಗಳನ್ನು ಹೊತ್ತು   ಸಂತೃಪ್ತಿಯ ನಗು ನಗುತ್ತಾ ಹೊರ ಬಂದೆವು . ಅಲ್ಲಿಂದ  ಪಯಣ  ಬೆಳೆಸಿದ್ದು   ಸಂಧ್ಯಾ ಭಟ್ ಮನೆಯ ಸಮೀಪದಲ್ಲೇ ಇದ್ದ    ಮಂಜುಗುಣಿ  ಕ್ಷೇತ್ರಕ್ಕೆ ...... !ಮಂಜುಗುಣಿ  ಶ್ರೀನಿವಾಸನ  ದರುಶನ  ಮಾಡಲಿಕ್ಕೆ .







3 comments:

Badarinath Palavalli said...

ತುಂಬ ದಿನಗಳ ನಂತರ ತಾವು ಹೀಗಾದರೂ ಬ್ಲಾಗಿಗೆ ಬಂದದ್ದು ಖುಷಿಕೊಟ್ಟಿತು. ನಾನು ಚಿತ್ರದುರ್ಗ ಬರೆಯುತ್ತೀರಂತ ಅಂದೊಕೊಂಡೆ, ಆದರೆ ತಮ್ಮ ಚಿತ್ತ ಶಿರಸಿಯತ್ತ!

ಸಂಧ್ಯಾ ಭಟ್ ಅವರ ಬ್ಲಾಗನ್ನೂ ನಾನೂ ಬಿಡದೆ ಓದಉತ್ತಿದ್ದಏನೆ. ಅತ್ಯಂತ ಸುಲಲಿತ ಮತ್ತು ಸೂಕ್ಷ್ಮತೆಯ ಕುಸುರಿಯ ಹೂರಣವದು.

ಅವರ ಮನೆಯ ವಾತಾವರಣ ಮತ್ತು ತಮ್ಮ ಛಾಯಾಗ್ರಹಣ ನೋಡಿ ನನಗೆ ತಟ್ಟನೆ ನೆನಪಾದದ್ದು ನಮ್ಮೂರ ಮಂದಾರ ಹೂವೆ ಚಿತ್ರದ ಲೊಕೇಷನ್.

ಸುಬ್ರಮಣ್ಯ said...

ಹವ್ಯಕರೇ ಹಾಗೆ. ನಮ್ಮನ್ನೂ ತಮ್ಮ ಕುಟುಂಬದ ಸದಸ್ಯರೇನೋ ಎಂಬಂತೆ ನಡೆದುಕೊಳ್ಳುತ್ತಾರೆ.

Srikanth Manjunath said...

ಬಾರಿ ಉದ್ದವಾದ ಒಂದು ಪ್ರವಾಸ ರೈಲಿನಂತೆ.. ಅಲ್ಲಲ್ಲಿ ನಿಂತು ನಿಂತು ಹೊರಟರೆ ಚೆನ್ನಾ.. ನಿಮ್ಮ ಬ್ಲಾಗ್ ಕೂಡ ಅನೇಕ ಮಾಸಗಳು ನಿಂತಿದ್ದು ನಿಜವಾದರೂ.. ಅದು ಇಂಜಿನ್ ನಂತೆ ಶಕ್ತಿಯನ್ನು ವರ್ಧಿಸಿಕೊಂಡು ಮುಂದಕ್ಕೆ ಓದಲು ಸಿದ್ಧವಾಗಿದೆ. ಎಂಥಹ ಸುಂದರ ಸಮಯದಲ್ಲಿ ನಿಮ್ಮ ಬ್ಲಾಗ್ ಪಯಣ ಶುರುವಾಗಿದೆ.

ನನ್ನ ಕನ್ನಡಿ ಎಂದೇ ಹೆಸರಾದ ಸಂಧ್ಯಾ ಪುಟ್ಟಿಯ ನಿಶ್ಚಯವಾದ ಬದುಕಿನ ಸುಂದರ ಕ್ಷಣಗಳ ಜೊತೆ. ನಾವಿಬ್ಬರು ಮಾತಾಡಿದ್ದೆ ಕಡಿಮೆ ಆದರೆ ನಮ್ಮೊಳಗೇ ಯಾವ ವಿಷಯಗಳು ಉಳಿಯುವುದಿಲ್ಲ.. ಕಾರಣ ಗೊತ್ತಿಲ್ಲ ಆದರೆ.. ಯಾವಳು ನನ್ನ ಮುದ್ದಿನ ಕನ್ನಡಿ..

ಸುಂದರ ಮನೆಯ ಮನದ ಸುಂದರ ಚಿತ್ರಗಳು.. ಸುಂದರ ಲೇಖನ ಸೂಪರ್ ಸರ್ಜಿ.. ನಿಮ್ಮ ಕ್ಯಾಮೆರ ಹರಿದಾಡದ ಸ್ಥಳಗಳು ಇಲ್ಲ.. ಸೂಪರ್ ಲೇಖನ